Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಮಾರ್ಟಿನ್‍’ಗೆ ‘ವೆಟ್ಟೈಯನ್’ ಮತ್ತು ‘ಕಂಗುವಾ’ ಸವಾಲು …

‘ಮಾರ್ಟಿನ್‍’ ಚಿತ್ರತಂಡ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಮೊದಲಿಗೆ ಚಿತ್ರದ ಬಜೆಟ್‍ ವಿಪರೀತ ಹೆಚ್ಚಾಗಿ, ಚಿತ್ರೀಕರಣ ತಡವಾಗಿ, ಎಲ್ಲವೂ ನಿಧಾನವಾಯಿತು. ನಂತರ ನಿರ್ಮಾಪಕರು ಮತ್ತು ನಿರ್ದೇಶಕರ ನಡುವಿನ ಕಿತ್ತಾಟ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೆಗೂ ಹೋಯಿತು. ಆ ನಂತರ ನಿರ್ದೇಶಕರು ಎಲ್ಲರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದು, ಪ್ರಕರಣ ಇನ್ನಷ್ಟು ಕಗ್ಗಂಟಾಯಿತು. ಈಗ ಎಲ್ಲವೂ ಮುಗಿದು, ಚಿತ್ರ ಬಿಡುಗಡೆಗ ಇನ್ನೇನು ಒಂದೂವರೆ ತಿಂಗಳಿದೆ ಎನ್ನುವಾಗಲೇ ಇನ್ನೊಂದು ಸಮಸ್ಯೆ ಶುರುವಾಗಿದೆ.

‘ಮಾರ್ಟಿನ್‍’ ಚಿತ್ರವು ಅಕ್ಟೋಬರ್‍ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಈಗ ಅ.10ರಂದು ರಜನಿಕಾಂತ್‍ ಅಭಿನಯದ ತಮಿಳಿನ ‘ವೆಟ್ಟೈಯನ್‍’ ಮತ್ತು ಸೂರ್ಯ ಅಭಿನಯದ ‘ಕಂಗುವಾ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ‘ಕಂಗುವಾ’ ಚಿತ್ರದ ಬಿಡುಗಡೆ ದಿನಾಂಕ ಈ ಹಿಂದೆಯೇ ಘೋಷಣೆಯಾಗಿತ್ತು. ಸೋಮವಾರ, ‘ವೆಟ್ಟೈಯನ್‍’ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದ್ದು, ಅದು ಸಹ ಅ.10ರಂದು ಬಿಡುಗಡೆಯಾಗಲಿದೆ.

ಈ ಮೂರೂ ಚಿತ್ರಗಳ ಪೈಕಿ, ‘ಮಾರ್ಟಿನ್‍’ ಮತ್ತು ‘ಕಂಗುವಾ’ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿದ್ದು, ‘ವೆಟ್ಟೈಯನ್‍’ ಮಾತ್ರ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ರಜನಿಕಾಂತ್‍ ಮತ್ತು ಸೂರ್ಯಗೆ ಕರ್ನಾಟಕದಲ್ಲೂ ಅಭಿಮಾನಿಗಳು ಹೆಚ್ಚಿದ್ದು, ‘ವೆಟ್ಟೈಯನ್‍’ ಮತ್ತು ‘ಕಂಗುವಾ’ ಚಿತ್ರಗಳು ಇಲ್ಲೂ ದೊಡ್ಡ ಓಪನಿಂಗ್‍ ಪಡೆಯಬಹುದು ಎಂಬ ನಿರೀಕ್ಷೆ ಇದೆ. ಆ ಎರಡು ಚಿತ್ರಗಳಿಂದ ಆಂಧ್ರ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ‘ಮಾರ್ಟಿನ್‍’ಗೆ ಸಮಸ್ಯೆ ಆಗಲಿದೆ. ಪ್ರಮುಖವಾಗಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ.

‘ವೆಟ್ಟೈಯನ್’ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿಕಾಂತ್‍ ಅಭಿನಯದ 170ನೇ ಚಿತ್ರ. ಇದರಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವೆಟ್ಟೈಯನ್’ ಚಿತ್ರದಲ್ಲಿ ಬಹಳ ವರ್ಷಗಳ ನಂತರ ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶರಾ ವಿಜಯನ್, ರಕ್ಷನ್, ಜಿ ಎಂ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನು, ‘ಕಂಗುವಾ’ ಒಂದು ಫ್ಯಾಂಟಸಿ ಚಿತ್ರವಾಗಿದ್ದು, ಸೂರ್ಯ ಎದುರು ನೆಗೆಟಿವ್‍ ಪಾತ್ರದಲ್ಲಿ ಬಾಲಿವುಡ್‍ ನಟ ಬಾಬ್ಬಿ ಡಿಯೋಲ್‍ ನಟಿಸುತ್ತಿದ್ದಾರೆ. ದಿಶಾ ಪಠಾಣಿ ಈ ಚಿತ್ರದ ನಾಯಕಿ. ಈ ಚಿತ್ರವು 38 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

Tags: