ಮುಂಬೈ: ಶಾಲೆಯಲ್ಲಿ ನೀಡಿದ ಬಿಸ್ಕೆಟ್ ತಿಂದು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಕೆಕೆಟ್ ಜಲಂಗಾವ್ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಸ್ಕೆಟ್ ತಿಂದು ಅಸ್ವಸ್ಥರಾಗಿದ್ದಾರೆ.
ಶಾಲೆಯಲ್ಲಿ ಆಯೋಜಿಸಿದ್ದ ಪೌಷ್ಠಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಿಸ್ಕೆಟ್ ವಿತರಿಸಲಾಗಿತ್ತು. ಬಳಿಕ ಬಿಸ್ಕೆಟ್ ತಿಂದ ನಂತರ ವಿದ್ಯಾರ್ಥಿಗಳಲ್ಲಿ ವಾಕರಿಕೆ ಹಾಗೂ ವಾಂತಿಯಾಗಿ ಅವರು ಅಸ್ವಸ್ಥರಾಗಿದ್ದಾರೆ.
ಬಳಿಕ ಅಸ್ವಸ್ಥರಾದ ಮಕ್ಕಳನ್ನು ಗ್ರಾಮದ ಮುಖ್ಯಸ್ಥರು ಹಾಗೂ ಶಿಕ್ಷಕರು ವಾಹನ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ವೈದ್ಯಾಧಿಕಾರಿ ಬಾಬಾ ಸಾಹೇಬ್ ಘುಘೆ ಮಾಹಿತಿ ನೀಡಿದ್ದು, ಫುಡ್ ಪಾಯಿಸನ್‌ನಿಂದ ಮಕ್ಕಳಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. 257 ವಿದ್ಯಾರ್ಥಿಗಳಲ್ಲಿ 153 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಅದರಲ್ಲಿ 7 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಶಾಲೆಯಲ್ಲಿ ಒಟ್ಟು 296 ವಿದ್ಯಾರ್ಥಿಗಳಿದ್ದು, ಕೆಲ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಿದ್ದ ಕಾರಣ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಶಾಲೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆಲ್ಲಾ ಅಸ್ವಸ್ಥರಾಗಿದ್ದು, ಸದ್ಯ ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.