ಬೆಂಗಳೂರು: ಮುಡಾ ಹಗರಣ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ್ದಾಗಿದೆ. ರಾಮಕೃಷ್ಣ ಹೆಗಡೆ ತರ ಸಿದ್ದರಾಮಯ್ಯ ಕೂಡಾ ರಾಜೀನಾಮೆ ಕೊಟ್ಟು ತನಿಖ ಎದುರಿಸಿ, ನಿರ್ದೋಷಿಯಾಗಿ ಬಂದು ಮತ್ತೆ ಸಿಎಂ ಗಾದಿಗೆ ಏರಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಆಗ್ರಹಿಸಿದ್ದಾರೆ.
ಈ ಕುರಿತು ಜೆಪಿ ಭವನದಲ್ಲಿ ಮಾತನಾಡಿರುವ ಅವರು, ತನಿಖೆ ಪೂರ್ಣವಾಗುವ ವರೆಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕು. ಕಾಂಗ್ರೆಸ್ ಕಾಲಾವಧಿಯ ಹಗರಣಗಳ ವಿರುದ್ಧ ನಾವು ಹೋರಾಟ, ಪಾದಯಾತ್ರೆ ಮಾಡಿದ್ದೇವೆ. ಯಾವಾಗ ಸಿಎಂ ಅವರು ಸದನದಲ್ಲಿ ಮುಡಾ ಬಗ್ಗೆ ಸ್ಪಷ್ಟನೆ ನೀಡದೇ ಹೊರಟು ಹೋದರೋ ಆಗ ಅನುಮಾನಗಳು ಸೃಷ್ಠಿಯಾದವು. ಈಗ ರಾಜ್ಯಪಾಲರು ಪ್ರಾಷಿಕ್ಯೂಷನ್ ಹೊರಡಿಸಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ನೀವು ತಪ್ಪು ಮಾಡಿಲ್ಲ ಎಂದಾದರೇ ಇರುವ ವಿಷಯಗಳನ್ನು ಜನರ ಮುಂದಿಡಿ, ಮುಡಾದಲ್ಲಿ ಸಾಕಷ್ಟು ಅನುಮಾನಗಳಿದ್ದು, ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕಾರಣಕ್ಕಾಗಿಯೇ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿಸಿದ್ದಾರೆ.
ಸಿಎಂ ಅವರಿಗೆ ಪ್ರಾಷಿಕ್ಯೂಷನ್ ನೀಡಿರುವ ಸಂಬಂಧ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸುತ್ತಿರುವ ಸಂಬಂಧ ಮಾತನಾಡಿ, ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ಪಾರದರ್ಶಕವಾಗಿದ್ದಾರೆ. ಕಾನೂನು ಹೋರಾಟ ಮಾಡಿ ಅದರಲ್ಲಿ ಯಶಸ್ವಿಯಾಗಿ ಬಂದು ಮತ್ತೆ ಸಿಎಂ ಆಗಿ ಮುಂದುವರೆಯಲಿ ಎಂದು ಸುರೇಶ್ ಬಾಬು ಒತ್ತಾಯಿಸಿದರು.





