Mysore
17
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಮೊದಲ ಬಾರಿಗೆ ಪೊಲೀಸ್‍ ಪಾತ್ರದಲ್ಲಿ ರಾಜ್‍ ಶೆಟ್ಟಿ; ‘ರಕ್ಕಸಪುರದೊಳ್‍’ ಪ್ರಾರಂಭ

ರಾಜ್‍ ಬಿ. ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ, ‘ಟರ್ಬೋ’ ಎಂಬ ಮಲಯಾಳಂ ಚಿತ್ರದಲ್ಲಿ ಅವರು ನೆಗೆಟಿವ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಹೊಸ ಚಿತ್ರವೊಂದರಲ್ಲಿ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ‘ರಕ್ಕಸಪುರದೊಳ್‍’.

‘ರಕ್ಕಸಪುರದೊಳ್‍’ ಚಿತ್ರವನ್ನು ಸಾಹಸ ನಿರ್ದೇಶಕ ಕೆ. ರವಿವರ್ಮ ನಿರ್ಮಿಸುತ್ತಿದ್ದು, ‘ಜೋಗಿ’ ಪ್ರೇಮ್‍ ಗರಡಿಯಲ್ಲಿ ಪಳಗಿರುವ ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದಂದು ನಡೆಯಿತು. ರಕ್ಷಿತ ಪ್ರೇಮ್‍ ಹಾಗೂ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡುವುದರ ಜೊತೆಗೆ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು ಪ್ರೇಮ್‍ ದಂಪತಿ.

‘ರಕ್ಕಸಪುರದೊಳ್‍’ ಚಿತ್ರದಲ್ಲಿ ರಾಜ್‍ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರೂ, ಇದು ಅದೇ ಮಾಮೂಲೀ ಪೊಲೀಸ್ ಪಾತ್ರವಲ್ಲವಂತೆ. ಈ ಕುರಿತು ಮಾತನಾಡುವ ರಾಜ್‍, ‘ನನ್ನ ಪಾತ್ರಕ್ಕೆ ನನ್ನದೇ ಆದ ಜರ್ನಿ, ಹುಡುಕಾಟ, ನೋವು, ಸುಖ ಎಲ್ಲವೂ ಇದೆ. ಇಲ್ಲಿನ ಪಾತ್ರ ತನ್ನ ಒಳಗಿರುವ ರಾಕ್ಷಸನನ್ನು ಎದುರಿಸಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಹಳ ನೈಜವಾದ ಪಾತ್ರ ಇದು. ಚಿತ್ರದಲ್ಲಿ ನಟಿಸುವುದಕ್ಕೆ ಕೆಲವು ಕಾರಣಗಳಿವೆ. ಚಿತ್ರ ನೋಡಿಸಿಕೊಂಡು ಹೋಗುವ ಗುಣವೂ ಅದರಲ್ಲೊಂದು. ಹಾಗಾಗಿ, ಈ ಚಿತ್ರವನ್ನು ಒಪ್ಪಿಕೊಂಡೆ. ಬರೀ ನನ್ನ ಪಾತ್ರವಷ್ಟೇ ಅಲ್ಲ, ಚಿತ್ರದಲ್ಲಿ ಬಹಳ ಒಳ್ಳೆಯ ಪಾತ್ರಗಳಿವೆ’ ಎಂದರು.

ರವಿ ವರ್ಮಾ ಈ ಹಿಂದೆ ನಿರ್ದೇಶನ ಮಾಡಿದ್ದರು. ಈಗ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಇದೊಂದು ಬೇರೆಯದೇ ರೀತಿಯ ಪ್ರಯತ್ನವಾಗಲಿದೆ ಎನ್ನುವ ಅವರು, ‘ರವಿ ಸಾರಂಗ ನನಗೆ ಎರಡು ವರ್ಷಗಳ ಪರಿಚಯ. ಅವರೊಂದು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ. ಒಂದೊಳ್ಳೆಯ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ’ ಎಂದರು.

ನಿರ್ದೇಶಕ ರವಿ ಸಾರಂಗ, ಕಳೆದ 10 ವರ್ಷಗಳಿಂದ ಪ್ರೇಮ್ ‍ಜೊತೆಗೆ ಕೆಲಸ ಮಾಡಿಕೊಂಡಿದ್ದಾರಂತೆ. ಅವರ ಚಿತ್ರಗಳಿಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಸಹಾಯ ಮಾಡುತ್ತಿದ್ದಾರಂತೆ. ಈಗ ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ಎಲ್ಲರೊಳಗಿರುವ ರಾಕ್ಷಸರ ಕುರಿತಾದ ಕಥೆ ಇದು. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು ‘ರಕ್ಕಸ’ ಎನ್ನಬಹುದು. ಅದನ್ನು ಹೇಗೆ ನಾಯಕ ಮೀರುತ್ತಾನೆ ಎನ್ನುವುದು ಚಿತ್ರದ ಕಥೆ. ಇದೊಂದು ಕ್ರೈಮ್‍ ಥ್ರಿಲ್ಲರ್‍ ಚಿತ್ರ. ಕೊಳ್ಳೇಗಾಲ ಹಿನ್ನೆಲೆಯ ಕಥೆ ಇದು. ಅಲ್ಲೊಂದು ಊರಿನಲ್ಲಿ ಕಥೆ ನಡೆಯುತ್ತದೆ’ ಎಂದರು.

‘ರಕ್ಕಸಪುರದೊಳ್‍’ ಚಿತ್ರದಲ್ಲಿ ರಾಜ್‍ ಶೆಟ್ಟಿ ಜೊತೆಗೆ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಖ್ಯಾತಿಯ ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ‌ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.

Tags:
error: Content is protected !!