ಬೆಂಗಳೂರು: ನಾವೆಲ್ಲಾ ಸಿಎಂ ಸಿದ್ದರಾಮಯ್ಯ ಪರ ಇದ್ದು, ಕಾನೂನು ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಚಿವರೊಂದಿಗೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಕೇವಲ ರಾಜಕೀಯ ಪಿತೂರಿ. ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಸಿಎಂ ಜೊತೆ ನಾವೆಲ್ಲಾ ಇದ್ದೇವೆ. ಇದನ್ನು ಕಾನೂನು ಹೋರಾಟ ಮಾಡುವ ಮೂಲಕ ಎದುರಿಸುತ್ತೇವೆ ಎಂದರು.
ರಾಜ್ಯಪಾಲರು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ಮಾರಕವಾದ ಪತ್ರ ಕಳುಹಿಸಿದ್ದಾರೆ. ಇದು ರಾಜಕೀಯ ಪಿತೂರಿ. ಮುಡಾ ಪ್ರಕರಣದಲ್ಲಿ ಯಾವುದೇ ಲೋಷದೋಷ ಆಗಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್‌ನವರು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಡೀ ಸಂಪುಟ ಸಚಿವರು ಸಿಎಂ ಬೆನ್ನಿಗೆ ನಿಂತಿದ್ದೇವೆ. ಹೈಕಮಾಂಡ್ ಸಹ ಸಿಎಂ ಬೆನ್ನಿಗೆ ನಿಂತಿದೆ. ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಈ ಪ್ರಾಸಿಕ್ಯೂಷನ್ ಕಾನೂನು ವಿರುದ್ಧವಾಗಿದೆ ಎಂದು ಕಿಡಿಕಾರಿದರು.





