ಚನ್ನಪಟ್ಟಣ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚೆನ್ನಪಟ್ಟಣ ವಿಧನಾಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ನಾನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳು ಕೇಳಿದ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.
ಚನ್ನಪಟ್ಟಣದಲ್ಲಿ ಕಳೆದ ಆರು ವರ್ಷಗಳಿಂದ ಧ್ವಜಾರೋಹಣ ನಡೆದಿಲ್ಲ ಎಂದು ಅಧಿಕಾರಿಗಳು ಬಂದು ಕೇಳಿದರು. ಅವರಿಗೆ ದೇಶಾಭಿಮಾನ ಇಲ್ಲ ಎಂದು ನನಗನಿಸುತ್ತದೆ. ಅವರು ಏನಾದರೂ ಮಾಡಲಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಟಾಂಗ್ ಕೊಟ್ಟರು.
ಗ್ಯಾರೆಂಟಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ಯಾರೆಂಟಿ ನಿಲ್ಲಿಸುವ ಬಗ್ಗೆ ಯಾವ ಸಚಿವರು ಮಾತನಾಡಿಲ್ಲ. ಅನುಕೂಲ ಇರುವವರಿಗೂ ಸೌಲಭ್ಯ ಸಿಗುತ್ತಿದ್ದು, ಅನುಕೂಲ ಇರುವವರಿಗೆ ಬೇಡ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಚಿಂತಿಸಿ ತೀರ್ಮಾನಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿಕೆ ಹೇಳಿದರು.