ಬೆಂಗಳೂರು: ಕನ್ನಡ ಚಿತ್ರರಂಗದ ಏಳಿಗೆಗಾಗಿ ನಾಳೆ ಕಲಾವಿದರ ಸಂಘದಲ್ಲಿ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ ನಡೆಸಲು ನಿರ್ಧರಿಸಲಾಗಿದೆ.
ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಪೂಜೆಗೆ ಸಕಲ ತಯಾರಿ ನಡೆಸಲಾಗಿದೆ.
ಚಾಮರಾಜನಗರ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ನಾಳೆ ಬೆಳಿಗ್ಗೆ 7.30ರಿಂದ 11.30ರವರೆಗೆ ಗಣಯಾಗ, ಆಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಲಿದೆ. ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್ ಅಣ್ಣಮ್ಮಯ್ಯ ಅವರು ಮಾಡಲಿದ್ದು, ಪೂಜೆಯ ಸಿದ್ಧತೆಯನ್ನು ನಟ ದೊಡ್ಡಣ್ಣ ನೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಈಗಾಗಲೇ ರಾಕ್‌ಲೈನ್ ವೆಂಕಟೇಶ್ ಮಾತನಾಡಿದ್ದು, ಕೋವಿಡ್ ನಂತರ ಸಿನಿಮಾ ರಂಗದಲ್ಲಿ ಉಂಟಾದ ಸಮಸ್ಯೆಗಳನ್ನು ಎದುರಿಸಲು ಇಂತಹ ಪೂಜೆ ಮಾಡಲು ಯೋಚಿಸಿದೆವು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೋವಿಡ್ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವಿನ ಘಟನೆಗಳು ನಡೆದಿವೆ. ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡವರು ಅಂತ ಯಾರು ಇಲ್ಲ. ಹೀಗಾಗಿ ನಾವು ದೇವರ ಮೊರೆ ಹೋಗುತ್ತಿದ್ದೇವೆ ಎಂದು ಪೂಜೆಯ ಬಗ್ಗೆ ಮಾಹಿತಿ ನೀಡಿದ್ದರು.