ಮೈಸೂರು: ನೆರೆಯ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ ಖಂಡಿಸಿ ಮೈಸೂರಿನಲ್ಲಿಂದು ವಿವಿಧ ವೃತ್ತಗಳಲ್ಲಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ಚಾಮುಂಡಿಪುರಂ, ವೇದಾಂತ ಹೆಮ್ಮಿಗೆ ವೃತ್ತ, ರಾಮಸ್ವಾಮಿ ವೃತ್ತ, ಗನ್ ಹೌಸ್ ವೃತ್ತ, ನ್ಯಾಯಾಲಯದ ಮುಂಭಾಗ ಸೇರಿದಂತೆ ನಗರದ ಪ್ರಮುಖ 30 ವೃತ್ತದಲ್ಲಿ ಭಿತ್ತಿ ಪತ್ರ ಹಿಡಿದು ಮೌನ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ಹಿಂಸಾಚಾರ ಖಂಡನೀಯ.
ಬಾಂಗ್ಲಾದಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದುಗಳ ಮನೆ, ಅಂಗಡಿ, ದೇವಸ್ಥಾನಗಳ ಮೇಲೆ ಹಲವು ದಾಳಿ ನಡೆಸಲಾಗಿದೆ. ಅತ್ಯಾಚಾರ, ಹತ್ಯೆ ಹಾಗೂ ಆಸ್ತಿನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಅಲ್ಲಿನ ಸೇನೆಯು ಇದನ್ನು ತಡೆಯಲು ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮುಂದಾದ್ರೂ ಹಿಂದುಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಸೇನೆ ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ಮಹೇಶ್, ರಂಗಸ್ವಾಮಿ, ಗಿರೀಶ್, ಸಂತೋಷ್, ವಿಕ್ರಂ ಅಯ್ಯಂಗಾರ್ ಸೇರಿದಂತ ಹಲವರು ಭಾಗಿಯಾಗಿದ್ದರು.