ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ಆಗಸ್ಟ್.10ರಂದು ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಭಾಷಣ ಮಾಡಿದ್ದರು.
ಭಾಷಣದುದ್ದಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಡಿಕೆಶಿ ಅವರು ಬೆಂಗಳೂರಿನ ಜೇಡರಹಳ್ಳಿ ರಸ್ತೆಗಳಲ್ಲಿ ಇರುವ ಮ್ಯಾನ್ ಹೋಲ್ ಮುಚ್ಚಳಗಳನ್ನು ಕಳ್ಳತನ ಮಾಡಿ ಗುಜರಿಗೆ ಮಾರಾಟ ಮಾಡುತ್ತಾ ಇದ್ದರು ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು.
ಹಾಗಾಗಿ ಎಚ್‌ಡಿಕೆ ಹೇಳಿಕೆಯಿಂದ ಡಿಕೆಶಿ ವರ್ಚಸ್ಸಿಗೆ ಧಕ್ಕೆ ಆಗಿದೆ. ಈ ಹೇಳಿಕೆಗಳನ್ನು ನೀಡಿ ಡಿ.ಕೆ.ಶಿವಕುಮಾರ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ ಎಂದು ಮನವಿ ಮಾಡಿದ್ದಾರೆ.