Mysore
23
scattered clouds

Social Media

ಬುಧವಾರ, 15 ಜನವರಿ 2025
Light
Dark

ಶಾಶ್ವತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಕೆ.ವಿ.ಪ್ರಭಾಕರ್

ಶಾಶ್ವತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಯವಾಗಲಿ ಎನ್ನುವ ಘೋಷಣೆ ಅವರು ಹೋದಲ್ಲಿ, ಬಂದಲೆಲ್ಲಾ ಇತ್ತೀಚಿಗೆ ಪ್ರತಿಧ್ವನಿಸುತ್ತಿದೆ. ಅಭಿಮಾನಿಗಳ ಅಂತರಂಗದ ಈ ಘೋಷಣೆಯಲ್ಲಿರುವ ಸಿದ್ದರಾಮಯ್ಯ ಅವರೇ ರಾಷ್ಟ್ರ ರಾಜಕಾರಣದ ಮಟ್ಟಿಗೆ, ಪ್ರಧಾನಿ ಮೋದಿಯವರ ನಿದ್ದೆಗೆಡಿಸಿರುವ ದಕ್ಷಿಣ ಭಾರತದ ವಿರೋಧ ಪಕ್ಷದ ನಾಯಕ ಕೂಡ ಹೌದು.

ಅಧಿಕಾರದಲ್ಲಿ ಇಲ್ಲದಿದ್ದಾಗ ಮಾತ್ರವಲ್ಲ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವಾಗಲೂ ಸಿದ್ದರಾಮಯ್ಯ ಅವರು ಬಂಡಾಯಗಾರರೇ ಆಗಿರುತ್ತಾರೆ ಎನ್ನುವುದನ್ನು ಅವರ 40 ವರ್ಷಗಳ ಹೋರಾಟದ ಚರಿತ್ರೆ ಹೇಳುತ್ತಿದೆ.

‘ಸಿದ್ದರಾಮಯ್ಯ ಅವರಿಗೆ ವಿರೋಧಿಸುವುದೇ ಕೆಲಸ; ಅವರದ್ದು ಎಲ್ಲದಕ್ಕೂ ವಿರೋಧ ಇದ್ದೇ ಇರುತ್ತೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಧಾನಸಭೆಯಲ್ಲಿ ಸಚಿವ ಆರ್. ಅಶೋಕ್ ಪದೇ ಪದೇ ಈ ಮಾತು ಹೇಳಿದ್ದರು. ಈಗ ಇದೇ ಆರ್.ಅಶೋಕ್ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದಾರೆ.

ಸಿದ್ದರಾಮಯ್ಯ ಅವರದ್ದು ಎಲ್ಲದಕ್ಕೂ ವಿರೋಧ ಇದ್ದೇ ಇರುತ್ತೆ ಎಂದು ಪದೇ ಪದೇ ಬೀಸುವ ಈ ಹೇಳಿಕೆಗಳು ಕೇವಲ ಹೀಗಳಿಕೆಗಳಾ? ಅಥವಾ ಹೆಗ್ಗಳಿಕೆಯಾ?

ಈ ಪ್ರಶ್ನೆಗೆ, ಆಗಸ್ಟ್ 9ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿನ ಸಿದ್ದರಾಮಯ್ಯ ಅವರ ಭಾಷಣದಲ್ಲೂ ಉತ್ತರ ಇದೆ.

‘ಪ್ರತಿಯೊಂದರಲ್ಲೂ ಬೇಡವಾದ್ದನ್ನು ಕಾಣುವ ಸಿದ್ದರಾಮಯ್ಯ ಅವರ ಧೋರಣೆಯ ಬೆನ್ನತ್ತಿ ಹೋಗಿ ವಿರೋಧ ಪಕ್ಷದ ನಾಯಕರಾಗಿ ಸದನದ ಒಳಗೆ ಮಾಡಿದ ಹೋರಾಟಗಳು ಮತ್ತು ಮುಖ್ಯಮಂತ್ರಿ ಆಗಿ ತೆಗೆದುಕೊಂಡ ನಿಷ್ಠುರ ತೀರ್ಮಾನಗಳ ಬಿಡಿ ಬಿಡಿ ಸಂಗತಿಗಳನ್ನು ಇಡಿ ಇಡಿಯಾಗಿ ಗ್ರಹಿಸಿದರೆ ಕನ್ನಡ ಮಣ್ಣಿನ ಪ್ರತಿರೋಧದ ಗುಣವೇ ಸಿದ್ದರಾಮಯ್ಯ ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುತ್ತದೆ.

ಲಂಕೇಶ್ ಅವರ ‘ಅದೇನೇ ಇರಲಿ, ನಾನದಕ್ಕೆ ವಿರೋಧಿ’ ಎನ್ನುವ ನುಡಿ ಸಿದ್ದರಾಮಯ್ಯ ಅವರ ನಡೆಯಲ್ಲಿದೆ. ಸಿದ್ದರಾಮಯ್ಯ ಅವರು ಯಾವ್ಯಾವುದರಲ್ಲಿ ಏನೇನನ್ನು ಬೇಡ ಎಂದಿದ್ದಾರೆ, ವಿರೋಧಿಸಿದ್ದಾರೆ ಎನ್ನುವುದನ್ನು ಪಟ್ಟಿ ಮಾಡಿ ಅಂಗೈಯಲ್ಲಿ ಇಟ್ಟುಕೊಂಡು ನೋಡಿದರೆ… ಬಸವಣ್ಣ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ್‌ರಿಂದ ಪಿ.ಲಂಕೇಶ್, ಪ್ರೊ. ಎಂ.ಡಿ.ನಂಜುಂಡಸ್ವಾಮಿ, ದೇವನೂರ ಮಹಾದೇವ ಅವರೆಲ್ಲರೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಯಾವುದನ್ನೆಲ್ಲಾ ಬೇಡ ಅಂದಿದ್ದಾರೋ ಅವುಗಳನ್ನೇ ಇವರೂ ಬೇಡ ಎಂದಿದ್ದಾರೆ.

ಬಸವಾದಿ ಶರಣರು, ಕುವೆಂಪು, ಸ್ವಾಮಿ ವಿವೇಕಾನಂದ, ನಾರಾಯಣ ಗುರು ಅವರು ಯಾವುದನ್ನೆಲ್ಲ ವಿರೋಧಿಸಿದ್ದರೋ ಅವೇ ವಿರೋಧಗಳು ಸಿದ್ದರಾಮಯ್ಯ ಅವರ ನಡೆ-ನುಡಿಗಳಲ್ಲಿ ಹೆಪ್ಪುಗಟ್ಟಿವೆ.

“ಅದೇನೇ ಇರಲಿ ನಾನದಕ್ಕೆ ವಿರೋಧಿ’ ಎನ್ನುವಾಗ ಲಂಕೇಶ್ ಅವರಿಗೆ ಇದ್ದ ವೈಚಾರಿಕ ಸ್ಪಷ್ಟತೆ, ಖಚಿತ ನಿಲುವು, ನಿಷ್ಠುರತೆ, ಬದ್ಧತೆ ಪ್ರತಿಯೊಂದರಲ್ಲೂ ಜನಪರತೆಯ ದೃಷ್ಟಿಯಲ್ಲಿ ಬೇಡವಾದುದನ್ನು ಕಾಣುವ ಬಂಡಾಯಗಾರ ಸಿದ್ದರಾಮಯ್ಯ ಅವರ ಧೋರಣೆಯಲ್ಲೂ ಇದೆ. ಈ ಧೋರಣೆಯನ್ನೇ ಭಂಜನೆ ಮಾಡುವ ಷಡ್ಯಂತ್ರ, ಸಂಚು, ಪಿತೂರಿಗಳ ವಿರುದ್ಧ ನಿರಂತರವಾಗಿ ಮತ್ತು ರಾಜಿರಹಿತವಾಗಿ ಸಮರ ನಡೆಸುತ್ತಲೇ ಇದ್ದಾರೆ.

ಕೇವಲ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾತ್ರವಲ್ಲ ಮುಖ್ಯಮಂತ್ರಿಯಾಗಿಯೂ ವ್ಯವಸ್ಥೆಯ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಸಮರ ನಡೆಸುತ್ತಲೇ ಇದ್ದಾರೆ. ಕಾಂಗ್ರೆಸ್ ‘ಕಟಕಟೆ’ಯಲ್ಲಿ ನಿಂತು ಈ ಸಮರವನ್ನು ಮುನ್ನಡೆಸುವುದು ಅಷ್ಟು ಸುಲಭದ, ಸರಳವಾದ ಸಂಗತಿಯಲ್ಲ. ಇದು ಎಲ್ಲರಿಂದಲೂ ಆಗುವಂತಹುದಲ್ಲ. ದಿವಂಗತ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೇ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಸಮರ ನಡೆಸಿದ್ದರು. ಅಧಿಕಾರದ ಚಾಟಿ ಹಿಡಿದು ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಸುಧಾರಣೆಯಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಲು ಹೊರಟಾಗ ಯಾವ್ಯಾವ ಪರಿಸ್ಥಿತಿಗಳನ್ನು, ಪ್ಯೂಡಲ್ ಮನಸ್ಥಿತಿಗಳನ್ನು, ಕಾರ್ಪೊರೇಟ್ ಹಿತಾಸಕ್ತಿಗಳನ್ನು ಇಂದಿರಾ ಗಾಂಧಿ ಎದುರಿಸಿದ್ದರೋ ಅವೇ ಪರಿಸ್ಥಿತಿಗಳನ್ನು ಅನ್ನಭಾಗ್ಯ, ಮೌಡ್ಯ ನಿಷೇಧ ಕಾಯ್ದೆಯಂತಹ ಯೋಜನೆಗಳನ್ನು ಜಾರಿಗೆ ತರುವಾಗ, ಸರ್ವರನ್ನೂ ಒಳಗೊಳ್ಳುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಾಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎದುರಿಸಿದ್ದಾರೆ.

ಅವತ್ತು ತಮ್ಮ ಕಾರ್ಯಕ್ರಮಗಳ ಕಾರಣಕ್ಕೆ ಇಂದಿರಾ ಗಾಂಧಿ ಅವರನ್ನು ಕಮ್ಯುನಿಸ್ಟ್ ಎಂದು ಬ್ರಾಂಡ್ ಮಾಡಿ ಒಂದು ಸೀಮಿತ ಚೌಕಟ್ಟಿಗೆ ಫಿಕ್ಸ್ ಮಾಡುವ ಪ್ರಯತ್ನವೂ ನಡೆದಿತ್ತು.

ತೆರಿಗೆಯಲ್ಲಿ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇತರೆ ರಾಜ್ಯಗಳಿಗೆ ಆಗಿರುವ, ಆಗುತ್ತಿರುವ ಅನ್ಯಾಯಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ನಿದ್ದೆಗೆಡಿಸುವಂತೆ ಧ್ವನಿ ಎತ್ತಿದರು. ಸಿದ್ದರಾಮಯ್ಯ ಅವರು ಮಂಡಿಸಿದ ಮುಂದಿಟ್ಟ ಅಂಕಿ ಅಂಶಗಳಿಗೆ ಉತ್ತರಿಸಲಾಗದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ಮೋದಿಯವರು ತಿಪ್ಪೆ ಸಾರಿಸಿದರು. ಯಾರಿಗೂ ಅನ್ಯಾಯ ಆಗಿಲ್ಲ ಅಂತ ಮಾತ್ರ ಹೇಳಿಕೆ ನೀಡಿದರು.

ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಎಸಗಿದ ದ್ರೋಹವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದರಿಂದ ರಾಜ್ಯಕ್ಕೆ ಬರ ಪರಿಹಾರ ಒದಗಿ ಬಂತು.

ಕೇಂದ್ರ ಸರ್ಕಾರವನ್ನು, ಪ್ರಧಾನಿ ಮೋದಿಯವರನ್ನು ಇಷ್ಟೊಂದು ಸ್ಪಷ್ಟತೆಯಿಂದ ಪ್ರತಿಭಟಿಸುತ್ತಿರುವವರು ಉತ್ತರದಲ್ಲಿ ರಾಹುಲ್ ಗಾಂಧಿ, ದಕ್ಷಿಣದಲ್ಲಿ ಸಿದ್ದರಾಮಯ್ಯ ಅವರು ಮಾತ್ರ.

ಜನರ ಹಕ್ಕಿಗಾಗಿ, ಅವರ ಹಿತಕ್ಕಾಗಿ ಕ್ರೀಸ್‌ನಿಂದ ಹೊರಗೆ ಕಾಲಿಟ್ಟು ಬ್ಯಾಟಿಂಗ್ ಮಾಡುವುದರಲ್ಲೂ ಸಿದ್ದರಾಮಯ್ಯ ಅವರು ನಿಸ್ಸಿಮರು ಎನ್ನುವುದು ಸಾಬೀತಾಗಿದೆ.

ಹೀಗಾಗಿ ಸಿದ್ದರಾಮಯ್ಯ ಅವರ ವಿರೋಧಗಳಿಗೆ ಒಂದು ಚರಿತ್ರೆ ಇರುವಂತೆಯೇ ಸಿದ್ದರಾಮಯ್ಯ ಅವರನ್ನು ವಿರೋಧಿಸುವವರಿಗೂ ಒಂದು ಪರಂಪರೆ ಇದೆ. ಈ ಪರಂಪರೆಯನ್ನು ಜೀರ್ಣಿಸಿಕೊಂಡು ದೇವರಾಜ ಅರಸರು ಪ್ರತಿರೋಧದ ಚರಿತ್ರೆಯನ್ನು ಮುಂದುವರಿಸಿದ್ದರು. ಅದೇ ಚರಿತ್ರೆಯನ್ನು ಈಗ ಸಿದ್ದರಾಮಯ್ಯ ಅವರು ಮುನ್ನಡೆಸುತ್ತಿದ್ದಾರೆ.

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುನ್ನಡೆಸುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧದ ಪ್ರತಿರೋಧದ ವರ್ತಮಾನದ ಹೆಜ್ಜೆ ಗುರುತುಗಳನ್ನು ಆಗಸ್ಟ್ 9ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಮಾಡಿದ ಭಾಷಣದಲ್ಲೂ ಕಾಣಬಹುದು. ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಸಂಚುಗಳನ್ನು ನೋಡಿಕೊಂಡು ನಾನು ಕೈ ಕಟ್ಟಿ ಕೂರುವವನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 9 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕೊಟ್ಟ ಎಚ್ಚರಿಕೆ ಬಿಜೆಪಿ-ಜಾ.ದಳ ದೋಸ್ತಿಗಳ ಒಳಗೆ ತಳಮಳ ಸೃಷ್ಟಿಸಿದಂತೆ ಕಾಣುತ್ತಿದೆ.

ಪಾದಯಾತ್ರೆ ಮುಗಿಯುವುದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡ್ತಾರೆ ಎಂದು ಘೋಷಿಸಿ ಬಿಜೆಪಿ-ಜಾ.ದಳ ಪಾದಯಾತ್ರೆ ಹೊರಟಿದ್ದವು ಆದರೆ ಪಾದಯಾತ್ರೆಯ ಸಮಾಪ್ತಿ ವೇಳೆಗೆ ದೋಸ್ತಿ ನಾಯಕರುಗಳು ಪರಸ್ಪರ ಮುಖ ನೋಡಿಕೊಳ್ಳಲಾಗದ ಮಟ್ಟಕ್ಕೆ ಕಚ್ಚಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಷ್ಟು ಗಟ್ಟಿಯಾಗಿದ್ದಾರೆ.

ಸಿದ್ದರಾಮಯ್ಯ ಅವರ ಕುರ್ಚಿ ಎಳೆಯಲು ಮುಂದಾಗಿ ತಮ್ಮ ರಾಜಕೀಯ ಭವಿಷ್ಯದ ಮೇಲೆ ಚಪ್ಪಡಿ ಎಳೆದುಕೊಂಡೆವಾ ಎನ್ನುವ ಭಯ ದೋಸ್ತಿಗಳಿಗೆ ಶುರುವಾದಂತೆ ಕಾಣುತ್ತಿದೆ.

ಹೀಗಾಗಿ ಮುಖ್ಯಮಂತ್ರಿ ಆಗಿಯೂ ಕೂಡ ಸಿದ್ದರಾಮಯ್ಯ ಅವರು ಸ್ಥಾಪಿತ ಹಿತಾಸಕ್ತಿಗಳ ಪಾಲಿಗೆ ವಿರೋಧ ಪಕ್ಷದ ನಾಯಕನೇ ಆಗಿದ್ದಾರೆ. ಆಡಳಿತಗಾರರಾಗಿಯೂ, ವಿರೋಧ ಪಕ್ಷದ ನಾಯಕರಾಗಿಯೂ ಸಿದ್ದರಾಮಯ್ಯ ಅವರು ತಮ್ಮದೇ ಆದ ಮಾದರಿಯನ್ನು ದಾಖಲಿಸಿದ್ದಾರೆ.

Tags: