Mysore
23
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇಂದು ತೆರೆ: ಸ್ಟೇಟ್‌ ಡಿ ಪ್ರಾನ್ಸ್‌ನಲ್ಲಿ ಕಾರ್ಯಕ್ರಮ

ಪ್ಯಾರಿಸ್:‌ ಜುಲೈ 26 ರಂದು ಆರಂಭಗೊಂಡ 33ನೇ ಒಲಿಂಪಿಕ್ಸ್‌ ಕ್ರೀಡಾ ಕೂಟಕ್ಕೆ ಇಂದು(ಆ.11) ಅದ್ದೂರಿ ತೆರೆ ಬೀಳಲಿದೆ.

ಸಮಾರೋಪ ಸಮಾರಂಭವು ಭಾರತೀಯ ಕಾಲಮಾನದ ಮಧ್ಯರಾತ್ರಿ 12:30ಕ್ಕೆ ಪ್ರಾರಂಭವಾಗಿ ನಸುಕಿನ ಜಾವ 3ರವರೆಗೆ ನಡೆಯುವ ಸಾಧ್ಯತೆ ಇದೆ.

ಸಮಾರೋಪ ಸಮಾರಂಭವು ಸಾಂಪ್ರದಾಯಿಕವಾಗಿ ಧ್ವಜಗಳ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ರಾಷ್ಟ್ರದ ಕ್ರೀಡಾ ಪಟುಗಳು ತಮ್ಮ ದೇಶದ ಧ್ವಜದೊಂದಿಗೆ ಭಾಗವಹಿಸಲಿದ್ದಾರೆ. ಒಲಿಂಪಿಕ್ಸ್‌ ಪ್ರಾರಂಭವಾದಾಗಿನಿಂದ ಗ್ರೀಕ್‌ ಧ್ವಜಕ್ಕೆ ಮೆರವಣಿಗೆಯಲ್ಲಿ ಮೊದಲ ಸ್ಥಾನವಿದೆ.

ಇಂದಿನ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಆತಿಥೇಯ ನಗರದ ಮೇಯರ್‌ ಒಲಿಂಪಿಕ್‌ ಧ್ವಜವನ್ನು ಒಲಿಂಪಿಕ್ಸ್‌ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸುತ್ತಾರೆ. ಬಳಿಕ ಅವರು ಅದನ್ನು ಮುಂದಿನ ಆತಿಥೇಯ ನಗರದ ಮೇಯರ್‌ಗೆ ಕೊಡಲಿದ್ದಾರೆ. ಸಮಾರಂಭದಲ್ಲಿ ಅಧಿಕೃತ ಒಲಿಂಪಿಕ್ಸ್‌ ಧ್ವಜವನ್ನು ಸ್ವೀಕರಿಸುವ ಮೊದಲ ಕಪ್ಪು ವರ್ಣದ ಮಹಿಳೆ ಎಂಬ ಹೆಗ್ಗಳಿಕೆ ಲಾಸ್‌ ಏಂಜಲೀಸ್‌ನ ಮೇಯರ್‌ ಬಾಸ್‌ ಅವರದ್ದಾಗಲಿದೆ. ನಂತರ ಕೊನೆಯದಾಗಿ ಒಲಿಂಪಿಕ್ಸ್‌ ಜ್ಯೋತಿ ನಂದಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ ಮುಕ್ತಾಯಗೊಳ್ಳಲಿದೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 32 ಕ್ರೀಡಾಕೂಟಗಳಲ್ಲಿ 10ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಪದಕಕ್ಕಾಗಿ ಸೆಣಸಾಟ ನಡೆಸಿದ್ದರು. ಭಾರತದಿಂದಲೂ ಒಟ್ಟು 117 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಆದರೆ ಭಾರತಕ್ಕೆ ಈ ಬಾರಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಈ ಒಲಿಂಪಿಕ್ಸ್‌ನಲ್ಲಿ‌ ಭಾರತ 6 ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು. ಈ ಪೈಕಿ 1 ಬೆಳ್ಳಿ ಹಾಗೂ 5 ಕಂಚಿನ ಪದಕಗಳಾಗಿವೆ.

Tags:
error: Content is protected !!