Mysore
23
broken clouds
Light
Dark

ಕೊಚ್ಚಿ ಹೋದ ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್: ಆಂಧ್ರ, ತೆಲಂಗಾಣದ ಕೆಲ ಜಿಲ್ಲೆಗಳಿಗೂ ಆತಂಕ

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಿಗೂ ಆತಂಕ ಮನೆಮಾಡಿದೆ.

ಜಲಾಶಯದ ಕ್ರಸ್ಟ್‌ ಗೇಟ್‌ ಕಳಚಿಕೊಂಡಿರುವ ಹಿನ್ನೆಲೆಯಲ್ಲಿ ನೀರ ರಭಸವಾಗಿ ಹರಿಯುತ್ತಿದ್ದು, ಒಂದೇ ಗೇಟ್‌ನಿಂದ ಬರೋಬ್ಬರಿ 35 ಸಾವಿರ ಕ್ಯೂಸೆಕ್ಸ್‌ ನೀರು ಹರಿಯುತ್ತಿದೆ. ಜಲಾಶಯದ 32 ಗೇಟ್‌ಗಳ ಪೈಕಿ 28 ಗೇಟ್‌ಗಳನ್ನು ತೆರೆಯಲಾಗಿದ್ದು, 4 ಜಿಲ್ಲೆಗಳಲ್ಲಿ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.

ಕ್ರಸ್ಟ್‌ ಗೇಟ್‌ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ ಮೂಲದ ಕಂಪನಿಯಿಂದ ಹೊಸಗೇಟ್‌ ತಂದು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸಗೇಟ್‌ ಅಳವಡಿಸಲು ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ದುರಸ್ತಿ ಕಾರ್ಯ ವಿಳಂಬವಾದರೂ ಡ್ಯಾಂನಲ್ಲಿ ನೀರು ಖಾಲಿಯಾಗುವ ಆತಂಕ ಮನೆಮಾಡಿದೆ.

ಇನ್ನು ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಕಳಚಿಕೊಂಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜನರಿಗೂ ತೀವ್ರ ಸಂಕಷ್ಟ ಎದುರಾಗಿದೆ.

ಡ್ಯಾಂನಲ್ಲಿ ನೀರು ಖಾಲಿಯಾದರೆ ಕೃಷಿ ಜಮೀನುಗಳಿಗೂ ನೀರು ಸಿಗದ ಪರಿಸ್ಥಿತಿ ಅಲ್ಲಿನ ಜಿಲ್ಲೆಗಳಿಗೂ ಕಾಡಲಿದೆ. ಈ ಹಿನ್ನೆಲೆಯಲ್ಲಿ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ಆಂಧ್ರ ಹಾಗೂ ತೆಲಂಗಾಣದ ನೀರಾವರಿ ಇಲಾಖೆ ಅಧಿಕಾರಿಗಳು ಕರ್ನಾಟಕದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ.