ಮಡಿಕೇರಿ: ಇಲ್ಲಿನ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ(ಆ.8) ರಾತ್ರಿ 10 ಗಂಟೆ ಸುಮಾರಿಗೆ ನಡೆದ ಬೈಕ್ ಅಪಘಾತದಲ್ಲಿ ಓರ್ವ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಅಸು ನೀಗಿದ್ದಾನೆ.
ಪಿರಿಯಾಪಟ್ಟಣ ತಾಲ್ಲೂಕು ನವಿಲೂರು ಗ್ರಾಮದ ಆಕಾಶ್ ಮತ್ತು ಪ್ರಸನ್ನ ಸಾವನ್ನಪ್ಪಿದವರು. ಪಿರಿಯಾಪಟ್ಟಣದಿಂದ ಮಡಿಕೇರಿಗೆ ಸೆಂಟ್ರಿಂಗ್ ಕೆಲಸದ ನಿಮಿತ್ತ ಆಗಮಿಸುತ್ತಿದ್ದ ಸಂದರ್ಭ ಶಾಂತಿಗೇರಿ ಸಮೀಪ ರಾತ್ರಿ 10 ಗಂಟೆ ಸಮಯದಲ್ಲಿ ಇವರ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ. ಇದರಿಂದ ತೀವ್ರ ಗಾಯಗೊಂಡ ಆಕಾಶ್ ಎಂಬಾತ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ. ಅಪಘಾತದಿಂದ ಚಿಂತಾಜನಕನಾಗಿದ್ದ ಇನ್ನೋರ್ವ ಸವಾರ ಪ್ರಸನ್ನ ಎಂಬಾತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.