ಸೌಕರ್ಯಗಳ ಕೊರತೆ: ಹುಂಡಿಯಲ್ಲಿ ಪತ್ರ ಹಾಕಿ ಶ್ರೀಕಂಠೇಶ್ವರನಿಗೆ ಅಳಲು ತೋಡಿಕೊಂಡ ಭಕ್ತರು
ಶ್ರೀಧರ್ ಆರ್.ಭಟ್
ನಂಜನಗೂಡು: ಹಣವುಳ್ಳವರು ವಸತಿ, ದುಬಾರಿ ವಸತಿ ಗೃಹಗಳಲ್ಲಿ ತಂಗುವರು. ಹಣವಿಲ್ಲದ ನನ್ನಂತಹವರು ಎಲ್ಲಿ ಮಲಗಬೇಕು, ನೀವೇ ಹೇಳಿ ಎಂದು ಶ್ರೀಕಂಠೇಶ್ವರನ ಹುಂಡಿಗೆ ಪತ್ರ ಹಾಕುವ ಮೂಲಕ ಭಕ್ತರು ಪ್ರಶ್ನಿಸಿದ್ದಾರೆ.
ಮಂಗಳವಾರ ಶ್ರೀಕಂಠೇಶ್ವರನ ಮಾಸಿಕ ಹುಂಡಿ ಹಣ ಎಣಿಕೆ ನಡೆಸುವಾಗ ಭಕ್ತರ ಈ ಪ್ರಶ್ನೆಗಳ ಸರಮಾಲೆಗಳ ಪತ್ರ ಬೆಳಕಿಗೆ ಬಂದಿದೆ.
ಭಗವಂತನಿಗೆ ಬಡವರು, ಶ್ರೀಮಂತರು ಎಂಬ ಭೇದವಿಲ್ಲ, ಹಾಗಂತ ಬಡವರು ದೇವರ ದರ್ಶನಕ ಬರಬಾರದೆ?, ‘ನಾವು ದೇವಾಲಯದ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಲಾಡ್ಜ್ಗೆ ಹೋಗಿ ಎಂದು ಅವರೇ ವಿಳಾಸ ಕೊಡುವರು, ಹಣವಿಲ್ಲದ ನಾನು ನಾ ಹೇಗೆ ಹೋಗಲಿ ನಾ ಬಡವನಯ್ಯಾ… ಶ್ರೀಕಂಠಪ್ಪ ನಿನ್ನ ಬಡ ಭಕ್ತರ ಕಷ್ಟ ನೀನೇ ಪರಿಹರಿಸಪ್ಪ’ ಎಂದು ತಮ್ಮ ಅಳಲನ್ನು ಆ ಪತ್ರದಲ್ಲಿ ತೋಡಿಕೊಳ್ಳಲಾಗಿದೆ.
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಭಕ್ತರೊಬ್ಬರು 100 ರೂ. ನೋಟಿನೊಂದಿಗೆ ಸೇರಿಸಿ ಬರೆದಿದ್ದ ಈ ಪತ್ರ ಗಮನ ಸೆಳೆದಿದೆ. ಇದು ಮಾತ್ರವಲ್ಲ. ದೇವಾ ಲಯದಲ್ಲಿ ಭಕ್ತರು ಎದುರಿಸುತ್ತಿರುವ ವಸತಿ ಸಮಸ್ಯೆ, ಮೂಲಸೌಲಭ್ಯಗಳ ಬಗ್ಗೆ ಪರಿಪರಿಯಾಗಿ ಭಕ್ತರು ತಮ್ಮ ಭಿನ್ನ ಭಿನ್ನ ಪತ್ರಗಳನ್ನು ಬರೆದು ಜಡ್ಡುಗಟ್ಟಿರುವ ದೇವಾಲಯದ ಆಡಳಿತ ವ್ಯವಸ್ಥೆ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರತಿ ತಿಂಗಳೂ ನಡೆಯುವ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಇಂತಹ ಅನೇಕ ಪತ್ರಗಳು ಭಕ್ತರಿಂದ ಸಲ್ಲಿಕೆಯಾಗುತ್ತಿವೆ. ಈ ಬಾರಿ 150ಕ್ಕೂ ಹೆಚ್ಚು ಪತ್ರಗಳು ಎಣಿಕೆ ವೇಳೆ ಲಭ್ಯವಾಗಿದ್ದು, ಬೆಂಗಳೂರು, ಮಂಡ್ಯ, ಕೆ.ಎಂ.ದೊಡ್ಡಿ ಸೇರಿದಂತೆ ರಾಜ್ಯ ನಾನಾ ಮೂಲೆಗಳ ವಿಳಾಸದಲ್ಲಿ ಪತ್ರ ಬರೆದಿರುವ ಭಕ್ತರು, ಆ ಪತ್ರಕ್ಕೆ 500 ರೂ, 100 ರೂ, 50 ರೂ. ನೋಟುಗಳನ್ನು ಟ್ಯಾಗ್ ಮಾಡಿ ತಮ್ಮ ನಿವೇದನೆಯನ್ನು ಹೇಳಿಕೊಂಡಿದ್ದಾರೆ.
ಇನ್ನು ಈ ಹಣವನ್ನು ದೇವಾಲಯಕ್ಕೆ ಆಗಮಿ ಸುವ ಭಕ್ತರ ಅನುಕೂಲಕ್ಕೆ ಬಳಕೆ ಮಾಡುವಂತಾ ಗಲಿ ಎಂಬ ಆಶಯವನ್ನೂ ಭಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಎಣಿಕೆಯಲ್ಲಿ ದೊರೆತಿರುವ ಪತ್ರಗಳಲ್ಲಿ ಬಹುತೇಕ ಭಕ್ತರು ಮೂಲಭೂತ ಸಮಸ್ಯೆಗಳ ಬಗ್ಗೆಯೇ ತಮ್ಮ ಅಹವಾಲು ಹೇಳಿಕೊಂಡಿ ದ್ದಾರೆಯೇ ಹೊರತು ವೈಯಕ್ತಿಕ ಬೇಡಿಕೆಗಳು ತೀರಾ ಕಡಿಮೆ ಎಂಬುದು ಗಮನಾರ್ಹ.
ಮಾಸಿಕ ಒಂದು ಕೋಟಿ ರೂ.ಗೂ ಅಧಿಕ ಆದಾಯವಿರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ದೂರದ ಊರುಗಳಿಂದ ಬರುವವರಿಗೆ ಸರಿಯಾದ ವಸತಿ ವ್ಯವಸ್ಥೆಯಿಲ್ಲ, ಕಪಿಲಾ ನದಿ ಸ್ನಾನಘಟ್ಟದಲ್ಲಿ ಸ್ನಾನ ಮಾಡುವ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಅನು ಕೂಲಕರ ವಾತಾವರಣವಿಲ್ಲ. ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಉರುಳು ಸೇವೆ ಮಾಡಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪತ್ರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಇದ ರಿಂದ ಬೇಸತ್ತು ಭಗವಂತ ನಿನಗೇ ಪತ್ರ ಬರೆಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.
ಭಕ್ತರು ನೀಡಿದ ಹಣ ಬ್ಯಾಂಕ್‌ಗೆ ಸೀಮಿತವಾ ಗದೇ ಅದನ್ನು ಜನರಿಗೆ ಸೌಲಭ್ಯ ಒದಗಿಸಲು ಬಳಸಬೇಕೆಂಬುದು ಅವರ ಒತ್ತಾಯವಾಗಿದೆ.
ವಸತಿ ಸಮಸ್ಯೆ ನಿಜ: ಈ ರೀತಿ ಭಕ್ತರು ಶ್ರೀಕಂಠೇ ಶ್ವರಸ್ವಾಮಿಗೆ ಪತ್ರದ ಮೂಲಕ ಹುಂಡಿಯಲ್ಲಿ ಹಾಕಿರುವ ಪತ್ರದಲ್ಲಿ ತಮ್ಮ ಮನದಾಳದ ವೇದನೆ ಯನ್ನು ಹಂಚಿಕೊಂಡಿರುವುದು ವಾಸ್ತವದಲ್ಲಿಯೂ ಸತ್ಯವಾಗಿದೆ. ದೇವಾಲಯದಲ್ಲಿ ಸರಿಯಾದ ವಸತಿ ವ್ಯವಸ್ಥೆಯಿಲ್ಲ. ಹುಣ್ಣಿಮೆ, ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ದೂರದ ಊರುಗಳಿಂದ ಆಗಮಿಸುವ ಜನರ ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆ ಯಿಲ್ಲ. ಒಂದೂವರೆ ವರ್ಷಗಳ ಹಿಂದೆ 75 ಕೊಠಡಿ ಗಳ ವಸತಿ ಸಮುಚ್ಚಯ ನಿರ್ಮಾಣಕ್ಕೆ ಶಿಲಾನ್ಯಾಸ ಪತ್ರಗಳ ನೆರವೇರಿಸಲಾಗಿತ್ತು. ಆದರೆ ಆ ಯೋಜನೆ ಇನ್ನೂ ಜಾರಿಯಾಗಿಲ್ಲ. ಗಿರಿಜಾ ಕಲ್ಯಾಣ ಮಂದಿರದಲ್ಲಿ ಸೊಳ್ಳೆಗಳ ಕಾಟ ಅತಿಯಾಗಿದೆ. ನೀರಿನ ಸಮಸ್ಯೆಯೂ ಇದೆ.
ದೇವಾಲಯದಲ್ಲಿರುವ ಸಮಸ್ಯೆಗಳನ್ನೇ ಭಕ್ತರು ಹುಂಡಿಗೆ ಪತ್ರ ಹಾಕಿ ಪ್ರಶ್ನಿಸಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಮಗೂ ಸಾಕಾಗಿದೆ. ಈಗ ಭಕ್ತರು ಹುಂಡಿ ಮೂಲಕ ಸಲ್ಲಿಸಿದ ಅಹವಾಲುಗಳನ್ನೂ ನಾವು ಮೇಲಾಧಿಕಾರಿಗಳಿಗೆ ರವಾನಿಸುತ್ತೇವೆ.
ಜಗದೀಶ್, ಇಒ, ಶ್ರೀಕಂಠೇಶ್ವರ ದೇವಾಲಯ
ಹುಂಡಿಯಲ್ಲಿ 1.12 ಕೋಟಿ ರೂ. ಸಂಗ್ರಹ
ನಂಜನಗೂಡು: ಮಂಗಳವಾರ ಶ್ರೀಕಂಠೇಶ್ವರ ದಾಸೋಹ ಭವನದಲ್ಲಿ ಮಾಸಿಕ ಹುಂಡಿ ಎಣಿಕೆ ನಡೆದಿದ್ದು, 1,12,92,056 ರೂ. ಸಂಗ್ರಹವಾಗಿದೆ. ಇದರೊಂದಿಗೆ ಭಕ್ತರು ಹರಕೆ ರೂಪದಲ್ಲಿ
ಸಲ್ಲಿಸಿರುವ 51,380 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 46 ವಿದೇಶಿ ಕರೆನ್ಸಿಗಳು, ರದ್ದಾದ 2 ಸಾವಿರ ರೂ. ಮುಖಬೆಲೆಯ ನೋಟುಗಳೂ ಪತ್ತೆಯಾಗಿವೆ. ಎಣಿಕೆ ವೇಳೆ ದೇಗುಲದ ಇಒ ಜಗದೀಶ್, ಸಹಾಯಕ ಅಧಿಕಾರಿ ಸತೀಶ, ಲೆಕ್ಕಾಧಿಕಾರಿ ಗುರುಮಲ್ಲೇಶ, ಇಒ ವೆಂಕಟೇಶ ಪ್ರಸಾದ್, ಮುಜರಾಯಿ ತಹಶಿಲ್ದಾರ್ ವಿದ್ಯುಲ್ಲತಾ, ಕೆನರಾ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.
ಭಕ್ತರಿಗಾಗುತ್ತಿರುವ ತೊಂದರೆಗಳ ಅಹವಾಲುಗಳ ಪತ್ರಗಳು ಹುಂಡಿಗಳಲ್ಲಿ ಪತ್ತೆಯಾಗಿವೆ. ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ಇಂದು ಸಿಕ್ಕಿದ ಅನೇಕ ಅಹವಾಲುಗಳನ್ನು ಒಬ್ಬರೇ ಬರೆದಿರಬಹುದು. ಹಾಗಿದ್ದೂ ಸಮಸ್ಯೆಗಳ ಪರಿಹಾರಕ್ಕೆ ನಾವು ಶ್ರೀಕಂಠೇಶ್ವರ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರದ ಮಟ್ಟದಲ್ಲಿ ಯತ್ನಿಸುತ್ತೇವೆ. ರಚಿಸುವ ಯೋಜನೆಯೂ ಸಿದ್ಧವಾಗುತ್ತಿದೆ.
ದರ್ಶನ್ ಧ್ರುವನಾರಾಯಣ್, ಶಾಸಕ
ದೇವಾಲಯದ ವಸತಿ ಸಮಸ್ಯೆ ಮನಗಂಡು ನಾನು ಅಧಿಕಾರದಲ್ಲಿದ್ದಾಗ 75 ಕೊಠಡಿಗಳ ನಿರ್ಮಾಣಕ್ಕಾಗಿ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಮಂಜೂರಾತಿ ಪಡೆದು ಅಂದಿನಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ವರಿಂದ ಭೂಮಿಪೂಜೆ ನೆರವೇರಿಸಿದ್ದರೂ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾ ಗಿಲ್ಲ. ಅವು ನಿರ್ಮಾಣವಾದರೆ ವಸತಿ ಸಮಸ್ಯೆ ಪರಿಹಾರವಾಗಲಿವೆ.
ಬಿ.ಹರ್ಷವರ್ಧನ್, ಮಾಜಿ ಶಾಸಕ





