ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಜುಲೈ.10ರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು, ಇದುವರೆಗೂ ಮದ್ದೂರು ತಾಲ್ಲೂಕಿನ ಕೊನೆ ಭಾಗಕ್ಕೆ ನೀರು ತಲುಪಿಲ್ಲ.
ಮದ್ದೂರು ತಾಲ್ಲೂಕಿನ ಕೊನೆಯ ಭಾಗಕ್ಕೆ ನೀರು ತಲುಪದ ಪರಿಣಾಮ ಅಧಿಕಾರಿಗಳ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ತೀವ್ರ ಬರದಿಂದ ರೈತರು ತತ್ತರಿಸಿ ಹೋಗಿದ್ದರು. ಆದರೆ ಈ ವರ್ಷ ಮಳೆರಾಯ ಕೃಪೆ ತೋರಿದ್ದು, ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ.10ರಿಂದಲೇ ಜಲಾಶಯದಿಂದ ನಾಲೆಗಳಿಗೆ ನೀರನ್ನು ಬಿಡಲಾಗುತ್ತಿದ್ದು, ರೈತರ ಭುಮಿ ಹದ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಆದರೆ ಮದ್ದೂರು ತಾಲ್ಲೂಕಿನ ಕೊನೆಯ ಭಾಗಕ್ಕೆ ನಾಲೆಗಳ ನೀರು ಇನ್ನು ತಲುಪಿಲ್ಲ. ಪರಿಣಾಮ ನಾಲೆ ನೀರನ್ನು ನಂಬಿ ಬೆಳೆ ಬೆಳೆಯಲು ಅಂದಾಜು ಮಾಡಿರುವ ರೈತರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀರು ಕಡೆ ಭಾಗಕ್ಕೆ ತಲುಪದೇ ಇರುವುದರಿಂದ ಭೂಮಿ ಹದಗೊಳಿಸುವಿಕೆ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಅಧಿಕಾರಿಗಳ ಬೇಜಾವಾಬ್ದಾರಿ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಕಡೆಯ ಭಾಗಕ್ಕೂ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ಮಳೆ ಇಲ್ಲದೇ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯ ಬರಿದಾಗಿತ್ತು. ಈ ಬಾರಿ ವರುಣನ ಕೃಪೆಯಿಂದ ಕೆಆರ್‌ಎಸ್ ಭರ್ತಿಯಾಗಿದ್ದು, ಒಳಹರಿವು ದಿನಾ ಹೆಚ್ಚಳವಾಗುತ್ತಿದೆ. ಹೀಗಾಗಿ ನಾಲೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಅನ್ನದಾತರು ಆಗ್ರಹಿಸಿದ್ದಾರೆ.