ಎಚ್.ಡಿ.ಕೋಟೆ: ಇಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜನ ಸಾಗರವೇ ಹರಿದುಬಂದಿದೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ ಹಾಗೂ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಇಂದು ಮಹದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಬೆಳಿಗ್ಗೆಯೇ ಹಲವು ಅಭಿಷೇಕಗಳನ್ನು ನೆರವೇರಿಸಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ದೇಗುಲಕ್ಕೆ ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇನ್ನೂ ದೇವಾಲಯಕ್ಕೆ ಬರುವವರಿಗೆ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಕಬಿನಿ ಹಿನ್ನೀರಿನಲ್ಲಿರುವ ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಪ್ರತೀ ಅಮಾವಾಸ್ಯೆ ದಿನಗಳಂದು ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕಬಿನಿ ಜಲಾಶಯ ಭರ್ತಿಯಾಗಿರುವುದರಿಂದ ಈ ದೇವಾಲಯವನ್ನು ನೋಡೋದೆ ಒಂದು ಚೆಂದ. ಸುತ್ತಲೂ ನೀರಿದ್ದು, ಒಂದು ಬದಿಯಲ್ಲಿ ಮಾತ್ರ ಈ ದೇವಾಲಯವಿದೆ. ಹೀಗಾಗಿ ದೇಗುಲಕ್ಕೆ ಬರುವ ಸಾರ್ವಜನಿಕರು ಕಬಿನಿ ಹಿನ್ನೀರಿನಲ್ಲಿ ಮೋಜು ಮಸ್ತಿ ಮಾಡೋದೂ ಸರ್ವೆ ಸಾಮಾನ್ಯವಾಗಿದೆ.