Mysore
19
overcast clouds
Light
Dark

ರಾಜ್ಯದಲ್ಲಿ ಕಾಂಗ್ರೆಸ್‌ ಕಿತ್ತೊಗೆಯಲು ಮೈತ್ರಿ ಹೋರಾಟ ನಡೆಸಲಿದೆ: ನಿಖಿಲ್‌ ಕುಮಾರಸ್ವಾಮಿ

ಮೈಸೂರು: ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ-ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರ ಸಜ್ಜಾಗಿದ್ದು, ಕಾಂಗ್ರೆಸ್‌ನ್ನು ರಾಜ್ಯದಿಂದ ಕಿತ್ತೊಗೆಯುವ ವರೆಗೂ ಮೈತ್ರಿ ಸರ್ಕಾರದ ಹೋರಾಟ ಮುಂದುವರೆಯಲಿದೆ ಎಂದು ಜೆಡಿಎಸ್‌ ಯುವಘಟಕ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಕಡೆಯ ಆಷಾಡ ಶುಕ್ರವಾರ ದಿನ ಚಾಮುಂಡಿ ದೇವಿಯ ದರ್ಶನ ಪಡೆದು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾಲ್ಮೀಕಿ ಹಗರಣ, ಮುಡಾ ಹಗರಣಗಳನ್ನು ಅಂತಿಮ ಘಟಕ್ಕೆ ಕೊಂಡೊಯ್ಯುವುದು ನಮ್ಮ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಜನರ ಪರವಾಗಿ ನಾವು ಒಗ್ಗಟ್ಟಾಗಿ ಈ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ನಿಖಿಲ್‌ ಹೇಳಿದರು.

ಇನ್ನು ರಾಜ್ಯಾದ್ಯಂತ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ನಾವು ಪಾದಯಾತ್ರೆಯನ್ನು ಮುಂದೂಡಲು ಮನವಿ ಮಾಡಿದ್ದೇವು. ಆದರೆ ಬಿಜೆಪಿ ಅವರು ಮುಂದೂಡುವುದು ಬೇಡ ಎಂದು ಹೇಳಿದ್ದಕ್ಕೆ ನಾವು ಸಹಮತ ಸೂಚಿಸಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದರು.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಹಗರಣ ನಡೆದಿರುವುದಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಿಎಂ ಅವರೇ ನೇರ ಹೋಣೆಯಾಗಿದ್ದು, ಈ ಎಲ್ಲಾ ಹಗರಣಗಳ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ ಎಂದು ಹೇಳಿದರು.

ಇನ್ನು ಮೈತ್ರಿಯಲ್ಲಿನ ಬಿರುಕು ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್‌, ಮೈತ್ರಿಗೆ ಜನ ಬೆಂಬಲ ಸಿಕ್ಕಿದ್ದಕ್ಕಾಗಿಯೇ, ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯವಾಗಿದೆ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು.