Mysore
14
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮಹಾರಾಜ ಟ್ರೋಫಿ 2024: ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್ ನಾಯಕ

ಬೆಂಗಳೂರು: ಮಹಾರಾಜ ಟ್ರೋಫಿ (ಕೆಎಸ್‌ಸಿಎ) ಟಿ20 2024 ಟೂರ್ನಿಗೆ ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿದೆ. ಆ ಮೂಲಕ ಸತತ ಮೂರನೇ ಸೀಸನ್‌ಗೂ ತಂಡದ ನಾಯಕರಾಗಿ ಕರುಣ್ ನಾಯರ್ ಆಯ್ಕೆಯಾಗದ್ದಾರೆ. ಇವರು ಕಳೆದ ಸೀಸನ್‌ನಲ್ಲಿ ಮೈಸೂರು ವಾರಿಯರ್ಸ್‌ ತಂಡವನ್ನು ಫೈನಲ್ ವರೆಗೆ ಕೊಂಡೊಯ್ದಿದ್ದರು.

ಕರುಣ್ ನಾಯರ್ ಕರ್ನಾಟಕ ತಂಡದ ಪರವಾಗಿ ಮತ್ತು 2012ರಿಂದ ಐಪಿಎಲ್ ನಲ್ಲಿ ಸಕ್ರಿಯವಾಗಿದ್ದು, 31 ವರ್ಷದ ಈ ಆಟಗಾರ 2016ರಲ್ಲಿ ಜಿಂಬಾಬ್ವೆಯಲ್ಲಿ ನಡೆದ ಒನ್ ಡೇ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಮ್ಯಾಚ್ ನಲ್ಲಿ ತ್ರಿಶತಕ ಬಾರಿಸುವ ಮೂಲಕ ವೀರೇಂದ್ರ ಸೆಹವಾಗ್ ಬಳಿಕ ತ್ರಿಶತಕ ಹೊಡೆದ ಎರಡನೇ ಬ್ಯಾಟ್ಸ್ ಮನ್ ಎಂಬ ಖ್ಯಾತಿ ಪಡೆದಿದ್ದಾರೆ.

ಮೈಸೂರು ವಾರಿಯರ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಕರುಣ್ ನಾಯರ್ ಮೊದಲ ಬಾರಿಗೆ ಮಾತನಾಡಿದ್ದು, ಭಾರತ ತಂಡವನ್ನು ಪ್ರತಿನಿಧಿಸಿರುವ ನಾನು ಈ ಪಂದ್ಯಾವಳಿಯಲ್ಲಿ ಯುವ, ಪ್ರತಿಭಾನ್ವಿತ ಆಟಗಾರರಿಗೆ ಮಾರ್ಗದರ್ಶನ ನೀಡಲು ಎದುರು ನೋಡುತ್ತಿದ್ದೇನೆ. ಆಫ್ ಫೀಲ್ಡ್ ಮತ್ತು ಆನ್ ಫೀಲ್ಡ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಳಿಕ ಮಾತನಾಡಿದ ಮೈಸೂರು ವಾರಿಯರ್ಸ್‌ನ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, ಕರುಣ್ ನಾಯರ್ ಅಸಾಧಾರಣ ಕ್ರಿಕೆಟ್ ಸಾಮರ್ಥ್ಯ ಮತ್ತು ಜ್ಞಾನ ಹೊಂದಿದ ಆಟಗಾರ. ಅವರು ನಮ್ಮ ತಂಡವನ್ನು ಯಶಸ್ಸಿನ ಕಡೆಗೆ ಕರೆದೊಯ್ಯುತ್ತಾರೆ ಎಂಬ ನಂಬಿಕೆ ನಮಗಿದೆ. ಪಂದ್ಯಾವಳಿಯ ಗೆಲುವನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಮಹಾರಾಜ ಟ್ರೋಫಿ ಪಂದ್ಯಾವಳಿಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದೆ. ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್ ಸೇರಿದಂತೆ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ.

Tags:
error: Content is protected !!