Mysore
21
clear sky

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕಮಿಷನ್‍ ಆರೋಪ ಸಾಬೀತಾದರೆ ಒಂದು ಕೋಟಿ ಕೊಡ್ತಾರಂತೆ ಅರ್ಜುನ್‍

‘ಮಾರ್ಟಿನ್‍’ ಚಿತ್ರದ ನಿರ್ಮಾಪಕ ಉದಯ್‍ ಮೆಹ್ತಾ ಅವರಿಗೆ ಡಿಜಿಟಲ್ ಟೆರೇನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಗ್ರಾಫಿಕ್ಸ್ ಸಂಸ್ಥೆಯಿಂದ ಮೋಸವಾಗಿದ್ದು, ಈ ಸಂಬಂಧ ಅವರು ಪೊಲೀಸ್ ಸ್ಟೇಶನ್‍ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ ಸಂಸ್ಥೆಯ ಸತ್ಯ ರೆಡ್ಡಿ ಎನ್ನುವವರು ನಿರ್ದೇಶಕ ಎ.ಪಿ. ಅರ್ಜುನ್‍ಗೆ ಕಮಿಷನ್‍ ಕೊಟ್ಟಿರುವುದಾಗಿ ಹೇಳಿದ್ದು ಸಾಕಷ್ಟು ಸುದ್ದಿಯಾಗಿದೆ.

ಒಂದು ಪಕ್ಷ ‘ಮಾರ್ಟಿನ್‍’ ಚಿತ್ರಕ್ಕೆ ಗ್ರಾಫಿಕ್ಸ್ ಮತ್ತು VFX ಕೆಲಸ ಮಾಡುವವರಿಂದ ಕಮಿಷನ್ ಪಡೆದೆ ಎಂಬ ಆರೋಪ ಸಾಬೀತಾದರೆ ಒಂದು ಕೋಟಿ ರೂ. ನೀಡುವೆ ಎಂದು ನಿರ್ದೇಶಕ ಎ.ಪಿ. ಅರ್ಜುನ್ ಸವಾಲು ಹಾಕಿದ್ದಾರೆ.

ಕಳೆದ ವಾರ ಯಾವಾಗ ಈ ಕಮಿಷನ್‍ ಆರೋಪ ಕೇಳಿಬಂದಿತ್ತೋ, ಆಗಲೇ ನಿರ್ದೇಶಕ ಎ.ಪಿ. ಅರ್ಜುನ್‍ ಪತ್ರಿಕಾಗೋಷ್ಠಿ ಮಾಡಿ, ಈ ಆರೋಪ ಸುಳ್ಳು ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ ಎಂದು ಹೇಳಿದ್ದರು.

ಮಂಗಳವಾರ ಚಿತ್ರದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಕಳೆದ 16 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ. ಬಹಳ ಕಷ್ಟಪಟ್ಟು ನನ್ನ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದೇನೆ. ಲಂಚ ಪಡೆಯುವುದು ನನ್ನ ಸಂಸ್ಕೃತಿಯಲ್ಲ’ ಎಂದರು.

ಅರ್ಜುನ್‍ ದೊಡ್ಡ ಬಿಲ್ಡಿಂಗ್ ಖರೀದಿಸಿದ್ದಾರೆ, ಲಂಚ ಪಡೆದಿದ್ದಾರೆ ಎಂಬ ಆರೋಪಗಳ ಕುರಿತು ಮಾತನಾಡಿರುವ ಅವರು, ‘ನಾನು 20 ಕೋಟಿ ಕೊಟ್ಟು ಒಂದು ಬಿಲ್ಡಿಂಗ್‍ ಖರೀದಿಸಿದೆ ಎಂದು ಸುದ್ದಿ ಮಾಡಿದರು. ಕೆಲವರು ಲಕ್ಷಾಂತರ ಕಮಿಷನ್‍ ಪಡೆದಿದ್ದೇನೆ ಎಂದರು. ನಾನು ಎಲ್ಲಾದರೂ ಐದು ಸಾವಿರ ಕಮಿಷನ್‍ ತಗೊಂಡಿದ್ದೀನಿ ಅಂತ ಯಾರಾದರೂ ಸಾಬೀತು ಮಾಡಿದರೆ ಒಂದು ಕೋಟಿ ರೂ ಕೊಡುತ್ತೇನೆ. ಈ ಪ್ರಕರಣದಲ್ಲಿ ನನ್ನ ಹೆಸರೇ ಇಲ್ಲ. ಯಾರೋ ಉದ್ದೇಶಪೂರ್ವಕವಾಗಿ ನನ್ನ ಹೆಸರು ಎಳೆದು ತರುತ್ತಿದ್ದಾರೆ’ ಎಂದರು.

ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿರುವುದಾಗಿ ಹೇಳಿರುವ ಅರ್ಜುನ್‍, ‘ಕಮಿಷನ್‍ ಪಡೆಯುವ ಅವಶ್ಯಕತೆ ನನಗಿಲ್ಲ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಹೊಸಬರ ಜೊತೆಗೆ ಹೆಚ್ಚು ಸಿನಿಮಾ ಮಾಡಿದ್ದೀನಿ. ದರ್ಶನ್‍ ಒಬ್ಬರನ್ನು ಬಿಟ್ಟು ಸ್ಟಾರ್‍ಗಳ ಜೊತೆಗೆ ಕೆಲಸ ಮಾಡಿಲ್ಲ. ಈ ಸಿನಿಮಾಗಳಿಂದ ಚಿತ್ರರಂಗಕ್ಕೆ ಬಹಳಷ್ಟು ಹೊಸ ಕಲಾವಿದರು, ತಂತ್ರಜ್ಞರು ಸಿಕ್ಕಿದ್ದಾರೆ. ಅವರೆಲ್ಲಾ ನನಗೆ ಕಮಿಷನ್‍ ಕೊಟ್ಟಿದ್ದಾರಾ?’ ಎಂದು ಪ್ರಶ್ನಿಸಿದರು.

Tags: