ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ನಾಡಕಚೇರಿ ಶಿಥಿಲಗೊಂಡು ಮಳೆ ನೀರು ಸೋರುತ್ತಿದ್ದು, ಮೇಲ್ಲಾವಣಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇತ್ತೀಚೆಗೆ ಆಂದೋಲನ’ ದಿನಪತ್ರಿಕೆಯಲ್ಲಿ ಈ ಕಟ್ಟಡದ ಅವಸ್ಥೆಯ ಬಗ್ಗೆ ವರದಿ ಮಾಡಲಾಗಿತ್ತು. ಇಷ್ಟಿದ್ದರೂ ನಾಡಕಚೇರಿಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿಲ್ಲ. ಈ ನಾಡಕಚೇರಿ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆ ನೀರು ಸೋರುತ್ತಿದೆ. ಕಟ್ಟಡದ ಮೇಲ್ಲಾವಣಿಯ ಚಕ್ಕೆಗಳು ಬೀಳುತ್ತಿದ್ದು, ಕಟ್ಟಡವೇ ಕುಸಿದುಬೀಳುವ ಆತಂಕ ಸೃಷ್ಟಿಯಾಗಿದೆ.
ಈಗ ಮಳೆಗಾಲವಾದ್ದರಿಂದ ಕಟ್ಟಡ ಪೂರ್ತಿ ಸೋರುತ್ತಿದ್ದು, ಕಟ್ಟಡದೊಳಗೆ ನಿಂತ ನೀರಿನಲ್ಲಿ
ಇಲ್ಲಿನ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬೇಕಾಗಿದೆ. ಇದರ ವ್ಯಾಪ್ತಿಯ ಹಳ್ಳಿಗಳ ಅನೇಕ ಜನರ ದಾಖಲೆಗಳು ಇದೇ ನಾಡಕಚೇರಿಯಲ್ಲಿವೆ. ಒಂದು ವೇಳೆ ಕಟ್ಟಡ ಕುಸಿದು ಬಿದ್ದರೆ ಅಥವಾ ಮಳೆ ನೀರು ತುಂಬಿದರೆ ಈ ದಾಖಲೆಗಳೆಲ್ಲ ನಾಶವಾಗುವ ಆತಂಕವಿದೆ. ಇನ್ನು ಪ್ರತಿನಿತ್ಯ ಈ ನಾಡಕಚೇರಿಗೆ ಅನೇಕ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಬಂದುಹೋಗುತ್ತಾರೆ. ಈ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಆದ್ದರಿಂದ ಸಂಬಂಧಪಟ್ಟವರು ಕೂಡಲೆ ಎಚ್ಚೆತ್ತುಕೊಂಡು ನಾಡಕಚೇರಿಯನ್ನು ಸ್ಥಳಾಂತರ ಮಾಡಬೇಕಿದೆ.
-ಪ್ರಶಾಂತ್, ಅಂತರಸಂತೆ, ಎಚ್.ಡಿ.ಕೋಟೆ ತಾ