ಮಂಡ್ಯ: ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ ಜಲಾಶಯದಿಂದ ಕೃಷಿ ಬೆಳೆಗಳಿಗೆ ನೀರು ಬಿಡಲಾಗುತ್ತಿದ್ದು. ರೈತರಿಗೆ ಅವಶ್ಯಕತೆ ಇರುವ ಚಿತ್ತನೆ ಬೀಜಗಳನ್ನು (ಭತ್ತ, ರಾಗಿ. ದ್ವಿದಳಧಾನ್ಯ ಹಾಗೂ ಇತರೆ) ರೈತ ಸಂಪರ್ಕ ಕೇಂದ್ರ, ಸಹಕಾರ ಸಂಘ ಹಾಗೂ ಎಫ್.ಪಿ.ಓ. ಗಳ ಮುಖಾಂತರ ಸಹಾಯಧನದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಮತ್ತು ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ರೈತರು ಜಿಲ್ಲೆಗೆ ಶಿಫಾರಸ್ಸು ಮಾಡಲಾದ ತಳಿಗಳನ್ನು ಮಾತ್ರ ಬಳಕೆ ಮಾಡಬೇಕಾಗಿ ಮಂಡ್ಯ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಭತ್ತದ ಉತ್ಪಾದನೆ ಹೆಚ್ಚಿಸಲು ಸುಧಾರಿತ ಬೇಸಾಯ ಕ್ರಮ
ಕೃಷಿ ಇಲಾಖೆ ವತಿಯಿಂದ “ಭತ್ತದ ಉತ್ಪಾದನೆ ಹೆಚ್ಚಿಸಲು ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿಯನ್ನು ನೀಡಲಾಗಿದ್ದು, ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಕೃಷಿ ವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೃಷಿ ಪರಿಕರ ಮಾರಾಟಗಾರರಿಂದ ಭತ್ತದ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸಲು ತಾಂತ್ರಿಕ ಮಾಹಿತಿಯನ್ನು ಪಡೆಯಬೇಕು.
ಸುಧಾರಿತ ಬೇಸಾಯ ಪದ್ಧತಿಗಳು
ಯಾಂತ್ರೀಕೃತ ಭತ್ತದ ಸಾಲು ಬೇಸಾಯ ಪದ್ದತಿ, ಶ್ರೀ ಪದ್ದತಿಯಲ್ಲಿ ಭತ್ತದ ಬೇಸಾಯ, ಡ್ರಮ್ ಸೀಡರ್‌ನಿಂದ ಭತ್ತದ ನೇರ ಬಿತ್ತನೆ ಹಾಗೂ ಕೂರಿಗೆಯಿಂದ ನೇರ ಬಿತ್ತನೆ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು.
ಸಮಗ್ರ ಪೋಷಕಾಂಶಗಳ ನಿರ್ವಹಣೆ
ಮುಖ್ಯ ಭೂಮಿ ಸಿದ್ದತೆ ಸಂದರ್ಭದಲ್ಲಿ ಪ್ರತಿ ಎಕರೆಗೆ 4 ಟನ್ ಕಾಂಪೋಸ್ಟ್ / ಕೊಟ್ಟಿಗೆ ಗೊಬ್ಬರ ಮತ್ತು 8 ಕೆ.ಜಿ ಸತುವಿನ ಸಲ್ವೇಟ್, ಲಘು ಪೋಷಕಾಂಶವನ್ನು ಮಣ್ಣಿಗೆ ಸೇರಿಸುವುದು ಹಾಗೂ ಭತ್ತದ ಬೆಳೆಗೆ ಶಿಫಾರಸ್ಸು ಮಾಡಲಾದ ಪ್ರಮಾಣದಲ್ಲಿ ವಿವಿಧ ಹಂತಗಳಲ್ಲಿ ರಸಗೊಬ್ಬರವನ್ನು ಎಕರೆಗೆ ಸಾರಜನಕ (40) : ರಂಜಕ (20) : ಬೊಟ್ಯಾಷ್ (20) ಮಾತ್ರ ಬಳಕೆ ಮಾಡಬೇಕು.
ಜೈವಿಕ ಗೊಬ್ಬರ ಬಳಕೆ
800 ಗ್ರಾಂ ಅಜೋಸ್ಪೆರಿಲ್ಲಂ ಅನ್ನು 25 ಕೆ.ಜಿ ಚೆನ್ನಾಗಿ ಕಳಿತ ಕಾಂಪೋಸ್ಟ್ ಗೊಬ್ಬರದ ಜೊತೆ ಬೆರೆಸಿಮುಖ್ಯ ಭೂಮಿಗೆ ನಾಟಿಗೆ ಮುಂಚೆ ಎರಚಿ ಉಳುಮೆ ಮಾಡುವುದು. 800 ಗ್ರಾಂ (ಪಿ.ಎಸ್.ಬಿ) ರಂಜಕ ಕರಗಿಸುವ ಜೀವಾಣು ಗೊಬ್ಬರವನ್ನು 4 ಕೆ.ಜಿ ಕೊಟ್ಟಿಗೆ ಗೊಬ್ಬರ ಹಾಗೂ 4 ಕೆ.ಜಿ ಮಣ್ಣಿನೊಡನೆ ಬೆರೆಸಿ ಪ್ರತಿ ಎಕರೆಗೆ ಭತ್ತ ನಾಟಿ ಮಾಡಿದ 6-8 ನೇ ದಿನಗಳಲ್ಲಿ ಎರಚುವುದರಿಂದ ಬೆಳೆಗಳಿಗೆ ನೇರವಾಗಿ ಸಾರಜನಕ, ರಂಜಕ, ಪೊಟ್ಯಾಷ್ ಹಾಗೂ ಇತರೆ ಲಘು ಪೋಷಕಾಂಶಗಳು ಲಭ್ಯವಾಗುವುದು ಹಾಗೂ ಸಾರಜನಕವನ್ನು ಭೂಮಿಯಲ್ಲಿ ಹೆಚ್ಚು ಹಿಡಿದಿಟ್ಟುಕೊಂಡು ನಿಧಾನವಾಗಿ ಸಸ್ಯಗಳಲ್ಲಿ ಬಿಡುಗಡೆಯಾಗುವಂತೆ ಮಾಡಲು ನ್ಯಾನೋ ಯೂರಿಯಾ ಬಳಕೆ ಮಾಡಬೇಕು.
ಸುಧಾರಿತ ಬೇಸಾಯ ಕ್ರಮಗಳಾದ ಹೊಸ ತಾಂತ್ರಿಕತೆಗಳ ಉಪಯೋಗ, ಸೂಕ್ತ ತಳಿಗಳ ಆಯ್ಕೆ, ನೀರು ನಿರ್ವಹಣೆ, ಜೈವಿಕ ಗೊಬ್ಬರ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಮಾಡುವುದರ ಮೂಲಕ ಭತ್ತದಲ್ಲಿ ಉತ್ಪಾದನೆ ಹೆಚ್ಚಿಸಲು ಸೂಕ್ತ ಕ್ರಮ ವಹಿಸಿ ಎಂದು ಮಂಡ್ಯ ಉಪವಿಭಾಗ, ಉಪ ಕೃಷಿ ನಿರ್ದೇಶಕಿ ಮಾಲತಿ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.