ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಜಲಾವೃತಗೊಂಡಿದ್ದು, ಕೆಸರಕ್ಕಿ ಹಳ್ಳದ ಬಳಿಯಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಕಾವೇರಿ ನದಿ ಆರ್ಭಟಕ್ಕೆ ಸೇತುವೆ ಸಂಪೂರ್ಣ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಮುತ್ತತ್ತಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮುತ್ತತ್ತಿಯ ಗ್ರಾಮಸ್ಥರು ಗ್ರಾಮಕ್ಕೆ ತೆರಳಲು ಪ್ರಾಣಾಪಾಯವನ್ನು ಲೆಕ್ಕಿಸದೇ ಜೀವದ ಹಂಗು ತೊರೆದು ಹಳ್ಳ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಪೂರ್ಣ ಮುಳುಗಡೆಯಾಗಿರುವ ಸೇತುವೆಯನ್ನೇ ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಗೂ ಕೂಡ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಜಲಾಶಯದಿಂದ ನೀರಿನ ಹರಿವು ಕಡಿಮೆಯಾದರಷ್ಟೇ ಮುತ್ತತ್ತಿಗೆ ಪ್ರವಾಸಿಗರಿಗೆ ಪ್ರವೇಶ ಅವಕಾಶ ಸಿಗಲಿದೆ. ಅಲ್ಲಿಯ ತನಕ ಮುತ್ತತ್ತಿಗೆ ಹೋಗಲು ಯಾರು ಕೂಡ ಯೋಜನೆ ರೂಪಿಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ.