Mysore
22
overcast clouds

Social Media

ಶನಿವಾರ, 03 ಜನವರಿ 2026
Light
Dark

ಹೀರೋ ಆದ ನವೀನ್ ಸಜ್ಜು; ಶೀರ್ಷಿಕೆ ಬಿಡುಗಡೆ ಮಾಡಿ ಬೆಂಬಲಕ್ಕೆ ನಿಂತ ತಾರೆಯರು

ಜನಪ್ರಿಯ ಗಾಯಕ ನವೀನ್‍ ಸಜ್ಜು ಹೀರೋ ಆಗುತ್ತಿರುವ ವಿಷಯ ಹಳೆಯದೇ. ಒಂದೆರಡು ವರ್ಷಗಳ ಹಿಂದೆಯೇ ಅವರು ‘ಮ್ಯಾನ್ಷನ್‍ ಹೌಸ್‍ ಮುತ್ತು’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಆದರೆ, ಆ ಚಿತ್ರದ ಸುದ್ದಿಯೇ ಇಲ್ಲ. ಈಗ ನವೀನ್‍ ಸಜ್ಜು, ‘ಲೋ ನವೀನ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ನವೀನ್‍ ಹೊಸ ಚಿತ್ರದ ಪೋಸ್ಟರ್‍ ಇದೀಗ ಸೋಷಿಯಲ್‍ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು, ನವೀನ್ ಹೊಸ ಪಯಣಕ್ಕೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಬೆಂಬಲ ನೀಡಿದ್ದಾರೆ. ತಮ್ಮ ಸೋಷಿಯಲ್‍ ಮೀಡಿಯಾದ ಖಾತೆಗಳ ಮೂಲಕ ‘ಲೋ ನವೀನ’ ಚಿತ್ರದ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ನವೀನ್‍ ಸಜ್ಜು ಹೊಸ ಪ್ರಯತ್ನಕ್ಕೆ ಶುಭ ಕೋರಿದ್ದಾರೆ.

‘ಲೋ ನವೀನ’ ಪೋಸ್ಟರ್‍ ನೋಡುತ್ತಿದ್ದಂತೆಯೇ ಇದೊಂದು ಗ್ರಾಮೀಣ ಚಿತ್ರ ಎಂದನಿಸುವುದು ಹೌದು. ನಟನೆ ಜೊತೆಗೆ ನವೀನ್‌ ಸಜ್ಜು ಅವರೇ ಈ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಧನುರ್ದಾರಿ ಪವನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಮೂವರು ಛಾಯಾಗ್ರಾಹಕರು ಕೆಲಸ ಮಾಡುತ್ತಿರುವುದು ವಿಶೇಷ.

‘ಬಿಗ್‌ ಬಾಸ್‌’ ಖ್ಯಾತಿಯ ಅಕ್ಷತಾ ಪಾಂಡವಪುರ ಹಾಗೂ ಪ್ರಸನ್ನ ಸಾಗರ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಎನ್‌.ಎಸ್‌. ಸ್ಟುಡಿಯೋ ಬ್ಯಾನರ್‌ ಅಡಿ ತಯಾರಾರಗುತ್ತಿರುವ ಸಿನಿಮಾಗೆ ಅನಿವಾಸಿ ಭಾರತೀಯರಾದ ವರ್ಜೀನಿಯಾ ನಿವಾಸಿ ಕೀರ್ತಿ ಸ್ವಾಮಿ ಬಂಡವಾಳ ಹೂಡಿದ್ದಾರೆ.

‘ಲೋ ನವೀನ’ ಚಿತ್ರಕ್ಕಾಗಿ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಸದ್ಯ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ.

Tags:
error: Content is protected !!