ಮೈಸೂರು: ಮುಡಾದಲ್ಲಿ ನಾನು 50;50 ಅನುಪಾತದಲ್ಲಿ ನಿವೇಶನ ಪಡೆದಿದ್ದರೆ ಅಥವಾ ನನ್ನ ಸಂಬಂಧಿಕರಿಗೆ ಶಿಫಾರಸ್ಸು ಮಾಡಿದ್ದನ್ನು ನಗರಾಭಿವೃದ್ಧಿ ಸಚಿವರು ಬಹಿರಂಗಪಡಿಸಿದರೆ ಪ್ರಾಧಿಕಾರಕ್ಕೆ ನಿವೇಶನ ವಾಪಸ್ ಮಾಡಿಸುವೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.
ನಗರದಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗಾರಾಭಿವೃದ್ಧಿ ಸಚಿವರು ಮುಡಾ ಹಗರಣದಲ್ಲಿ ಸುಖಾ ಸುಮ್ಮನೆ ನನ್ನ ಹೆಸರು ತಂದಿದ್ದಾರೆ. ಅವರು ಹೇಳಿರುವ ಸರ್ವೆ ನಂಬರ್ ನಾನೇ ಹುಡುಕಿಸುವೆ. ಆರ್‌ಟಿಐಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದು ಎಲ್ಲವನ್ನು ಬಹಿರಂಗಪಡಿಸುತ್ತೇನೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ನಗಾರಾಭಿವೃದ್ಧಿ ಸಚಿವರು ನಿನ್ನೆ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿರುವ ಅಷ್ಟು ಮಾಹಿತಿ ನಿಜವಾಗಿದ್ದರೆ ಅಷ್ಟು ಜಮೀನು ಸ್ವಂತ ಹಣದಲ್ಲಿ ಖರೀದಿಸಿ ಪ್ರಾಧಿಕಾರಕ್ಕೆ ವಾಪಸ್ ಕೋಡುತ್ತೇವೆ. ಸುಮ್ಮನೆ ವಿಚಾರ ಡೈವರ್ಟ್ ಮಾಡಲು ಸುಳ್ಳು ಹೇಳಬೇಡಿ. ಮುಡಾ ಹಗರಣದ ಬಗ್ಗೆ ದಿಕ್ಕು ತಪ್ಪಿಸುವ ಬದಲು ಸಮಗ್ರ ತನಿಖೆ ನಡೆಸಲು ಮುಂದಾಗಬೇಕು ಎಂದು ಸಾ.ರಾ ಮಹೇಶ್ ಆಗ್ರಹ ಮಾಡಿದರು.
ಮುಡಾದಲ್ಲಿ ನಡೆದಿರುವ ಎಲ್ಲ ಅವ್ಯವಹಾರ ನನಗೆ ಗೊತ್ತು. ಯಾರು ಎಷ್ಟು ಸೈಟ್ ಪಡೆದಿದ್ದಾರೆ ಎಲ್ಲವೂ ಗೊತ್ತಿದೆ. ಆದರೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ವಿಶ್ರಾಂತಿ ಪಡೆಯಿರಿ ಎಂದು ಜನ ನನ್ನನ್ನು ಸೋಲಿಸಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದೇನೆ. ಸುಮ್ಮನೆ ನನ್ನ ಹೆಸರು ತರ್ತೀರಾ? ಎಂದು ವಾಗ್ದಾಳಿ ನಡೆಸಿದರು.