ಮೈಸೂರು: ತಾಲೂಕಿನ ಮೆಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶುಕ್ರವಾರ(ಜು.26) ಡೆಂಗ್ಯೂ ನಿಯಂತ್ರಣ ಜಾಗೃತಿ ಕಾರ್ಯಕ್ರಮ ನಡೆಯಿತು.
ಡೆಂಗ್ಯೂ ನಿಯಂತ್ರಣದ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಶುಕ್ರವಾರ ಡ್ರೈ ಡೇ ಎಂದು ಗೊತ್ತುಪಡಿಸಲಾಗಿದೆ. ಈ ಮಾದರಿಯಲ್ಲಿ ಇಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಅವರ ನೇತೃತ್ವದಲ್ಲಿ ಡ್ರೈ ಡೇ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಯಿತು.
ಪ್ರತಿ ಮನೆ ಮನೆಗೂ ತಲುಪಿದ ಅಧಿಕಾರಿಗಳು ಆರೋಗ್ಯದ ಬಗ್ಗೆ ಸಲಹೆಗಳನ್ನು ನೀಡಿದರು. ಜತೆಗೆ ಸುತ್ತಮುತ್ತಲಿವ ವಾತಾವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಹೇಳಿ, ಮನೆಯ ಅಕ್ಕ ಪಕ್ಕ ನೀರು ನಿಲ್ಲದಂತೆ ಎಚ್ಚರವಹಿಸುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕ್ಷಿಪ್ರ ಪಡೆ ತಂಡದವರು ಭಾಗವಹಿಸಿದ್ದರು.