Mysore
21
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ವಿನೋದ್‍ ದೋಂಡಾಳೆ ಸಾವಿನ ನಂತರ ‘ಅಶೋಕ ಬ್ಲೇಡ್‍’ ಕಥೆಯೇನು?

ಸತೀಶ್‍ ನೀನಾಸಂ ಅಭಿನಯದ ‘ಅಶೋಕ ಬ್ಲೇಡ್‍’ ಚಿತ್ರವು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿ ಶೇ. 70ರಷ್ಟು ಚಿತ್ರೀಕರಣ ಮುಗಿದಿತ್ತು. ಇನ್ನೂ ಸ್ವಲ್ಪ ಭಾಗದ ಚಿತ್ರೀಕರಣವಾಗಬೇಕು ಎನ್ನುವಷ್ಟರಲ್ಲಿ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ವಿನೋದ್‍ ದೋಂಡಾಳೆ ಅವರ ಸಾವಿನ ಸುದ್ದಿ ಬಂದಿದೆ. ಕಿರುತೆರೆಯಲ್ಲಿ ದೊಡ್ಡ ಹೆಸರಾಗಿದ್ದ ವಿನೋದ್‍, ಹಿರಿತೆರೆಗೆ ಬಂದು ತಪ್ಪು ಮಾಡಿದರು, ಚಿತ್ರಕ್ಕೆ ಹೆಚ್ಚು ಸಾಲ ಮಾಡಿಕೊಂಡು ಅದನ್ನು ತೀರಿಸುವುದಕ್ಕೆ ಸಾಧ್ಯವಾಗದೆ ಆತ್ಮಹತ್ಯೆಯ ಹಾದಿ ಹಿಡಿಯಬೇಕಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಇಷ್ಟಕ್ಕೂ ಯಾಕೆ ‘ಅಶೋಕ ಬ್ಲೇಡ್‍’ ಚಿತ್ರೀಕರಣ ವಿಳಂಬವಾಯಿತು ಮತ್ತು ಸಾಲ ಯಾಕೆ ಹೆಚ್ಚಿತ್ತು ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಮಾತನಾಡಿರುವ ಚಿತ್ರದ ಮತ್ತೊಬ್ಬ ನಿರ್ಮಾಪಕ ವರ್ಧನ್‍ ಹರಿ, ‘ಸಮಸ್ಯೆ ಇದ್ದಿದ್ದು ಹೌದು. ಚಿತ್ರ ಶುರುವಾಗಿ ಎರಡು ವರ್ಷವಾದರೂ ಇನ್ನೂ ಮುಗಿದಿಲ್ಲ, ಇನ್ನೂ ಚಿತ್ರೀಕರಣ ಬಾಕಿ ಇದೆ ಎಂಬ ಬೇಸರ ವಿನೋದ್‍ ಅವರಿಗೆ ಇತ್ತು. ಆದರೆ, ಅದಕ್ಕೆ ಪರಿಹಾರ ಹಿಂದಿನ ದಿನವಷ್ಟೇ ಸಿಕ್ಕಿತ್ತು. ಶುಕ್ರವಾರವಷ್ಟೇ ನಮಗೆ ಹೂಡಿಕೆದಾರರು ಸಿಕ್ಕಿದ್ದರು. ಚಿತ್ರದ ಶೋರೀಲ್‍ ನೋಡಿ, ಚಿತ್ರಕ್ಕೆ ಐದು ಕೋಟಿಯಷ್ಟು ಬಂಡವಾಳೆ ಹೂಡಿಕೆ ಮಾಡುವುದಕ್ಕೆ ರೆಡಿಯಾಗಿದ್ದರು. ಇದರಿಂದ ವಿನೋದ್‍ ಸಹ ಬಹಳ ಖುಷಿಯಾಗಿದ್ದರು. ಆದರೆ, ಶನಿವಾರ ಬೆಳಿಗ್ಗೆ ಅವರು ನಿಧನರಾದ ಸುದ್ದಿ ಬಂತು. ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದರೆ ಏನಾದರೂ ಹೇಳಬಹುದಿತ್ತು. ಆದರೆ, ಪರಿಹಾರ ಸಿಕ್ಕಿದ ಮೇಲೆ ಯಾಕೆ ದುಡುಕಿದರೋ ಗೊತ್ತಿಲ್ಲ’ ಎನ್ನುತ್ತಾರೆ ವರ್ಧನ್‍.

ಚಿತ್ರದ ಪ್ಲಾನಿಂಗ್‍ನಲ್ಲಿ ಯಡವಟ್ಟಾಗಿದ್ದೇ ಎಲ್ಲದಕ್ಕೂ ಕಾರಣ ಎಂಬುದು ಅವರ ಅಭಿಪ್ರಾಯ. ‘ನಾವು 45 ದಿನಗಳಲ್ಲಿ ಚಿತ್ರೀಕರಣ ಮುಗಿಸಬೇಕೆಂದುಕೊಂಡಿದ್ದೆವು. ಆದರೆ, 87 ದಿನ ಆಯ್ತು. ಆರಂಭದಲ್ಲಿ ಒಂದೂವರೆ ಕೋಟಿಯಲ್ಲಿ ಮುಗಿಸಬೇಕು ಅಂತಂದುಕೊಂಡಿದ್ದು ಹೌದು. ಆದರೆ, ಚಿತ್ರ ಬೆಳೆಯುತ್ತಾ ಬೆಳೆಯುತ್ತಾ ಐದು ಕೋಟಿಯಷ್ಟಾಯಿತು. ನಾಲ್ಕು ದಿನಗಳ ಕ್ಲೈಮ್ಯಾಕ್ಸ್ ಚಿತ್ರೀಕರಣ 14 ದಿನಗಳಾಯ್ತು, ಕ್ಲೈಮ್ಯಾಕ್ಸ್ ಫೈಟಿಗೆ 45 ಲಕ್ಷ ಖರ್ಚಾಯಿತು. ಚೆನ್ನಾಗಿ ಮಾಡಬೇಕು ಅಂತ ಹೋಗಿದ್ದಿಕ್ಕೆ ಹೀಗಾಯ್ತು. ಚಿತ್ರದ ಬಗ್ಗೆ ವಿನೋದ್‍ಗೆ ತುಂಬಾ ವಿಶ್ವಾಸವಿತ್ತು. ಆದರೆ, ಯಾವಾಗ ಚಿತ್ರ ನಿಂತಿತೋ ಅವರು ಮಾನಸಿಕವಾಗಿ ಕುಗ್ಗಿದ್ದರು’ ಎನ್ನುತ್ತಾರೆ ವರ್ಧನ್‍.

‘ಅಶೋಕ ಬ್ಲೇಡ್‍’ ಚಿತ್ರಕ್ಕೆ ಮುಂದಿನ ತಿಂಗಳು ಬಾಕಿ ಇರುವ ಚಿತ್ರೀಕರಣ ನಡೆಯಲಿದೆಯಂತೆ. ವಿನೋದ್‍ ಹೆಸರಲ್ಲೇ ಚಿತ್ರವು ತೆರೆಗೆ ಬರಲಿದೆ. ‘ಈ ಚಿತ್ರದಿಂದ ನಿಮಗೆ ತುಂಬಾ ದೊಡ್ಡ ಹೆಸರು ಬರುತ್ತೆ ಎಂದು ಹೇಳುತ್ತಲೇ ಇದ್ದೆ. ಇದು ಅವರ ಕನಸು. ಹಾಗಾಗಿ, ಅವರ ಹೆಸರಲ್ಲೇ ಚಿತ್ರ ಬಿಡುಗಡೆಯಾಗುತ್ತದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ ವರ್ಧನ್‍.

Tags: