Mysore
26
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜನ ಬಾರದೆ ಮುಚ್ಚಿದ್ದ 18 ಚಿತ್ರಮಂದಿರಗಳ ಬೀಗ ತೆಗೆಸಿದ ‘ಭೀಮ’

‘ದುನಿಯಾ’ ವಿಜಯ್‍ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಆಗಸ್ಟ್ 09ಕ್ಕೆ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಹೊಸ ವಿಷಯವೆಂದರೆ, ಈ ಚಿತ್ರದಿಂದಾಗಿ ಬಂದ್‍ ಆಗಿರುವ 18 ಚಿತ್ರಮಂದಿರಗಳನ್ನು ಪುನಃ ಪ್ರಾರಂಭಿಸಲಾಗುತ್ತಿದೆ.

‘ಭೀಮ’ ಚಿತ್ರದ ಚಿತ್ರೀಕರಣ ಮತ್ತು ಬೇರೆ ಕೆಲಸಗಳು ಮುಗಿದು ಕೆಲವು ತಿಂಗಳುಗಳೇ ಆದರೂ, ಚಿತ್ರತಂಡ ಅದ್ಯಾಕೋ ಚಿತ್ರ ಬಿಡುಗಡೆ ಮಾಡುವ ಮನಸ್ಸು ಮಾಡಿರಲಿಲ್ಲ. ಚಿತ್ರದ ಬ್ಯುಸಿನೆಸ್ ಆಗದಿರುವ ಕಾರಣ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಈಗ ಚಿತ್ರತಂಡದವರು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಚಿತ್ರದ ಕುರಿತು ಮಾತನಾಡಿರುವ ನಿರ್ಮಾಪಕ ಜಗದೀಶ್‍ ಗೌಡ, ‘ಕಳೆದ ಕೆಲವು ತಿಂಗಳುಗಳಲ್ಲಿ ಮುಚ್ಚಿಹೋಗಿದ್ದ 18 ಚಿತ್ರಮಂದಿರಗಳು, ಈ ಚಿತ್ರದಿಂದ ಪ್ರಾರಂಭವಾಗುತ್ತಿವೆ. ಬಿ.ಕೆ.ಟಿ ಬಿಟ್ಟು ಮಿಕ್ಕೆಲ್ಲಾ ಪ್ರದೇಶಗಳ ವಿತರಣೆ ಹಕ್ಕುಗಳನ್ನು ಕೊಟ್ಟಿದ್ದೇವೆ. 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳು ಮತ್ತು ಹೊರದೇಶಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಕೆ.ಆರ್.ಜಿ. ಸ್ಟುಡಿಯೋಸ್‍ ಸಹಾಯ ಮಾಡುತ್ತಿವೆ’ ಎಂದರು.

‘ದುನಿಯಾ’ ವಿಜಯ್‍ ನಿರ್ದೇಶಿಸುತ್ತಿರುವ ಎರಡನೆಯ ಕಥೆ ಇದು. ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಡ್ರಗ್ಸ್ ದಂಧೆಯ ಕುರಿತಾದ ಈ ಚಿತ್ರವನ್ನು ನೋಡಿರುವ ಸೆನ್ಸಾರ್‍ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದೆ. ಈ ಚಿತ್ರಕ್ಕೆ ‘ದುನಿಯಾ’ ವಿಜಯ್‍ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದು, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಅಶ್ವಿನಿ, ರಂಗಾಯಣ ರಘು, ಅಚ್ಯುತ್‍ ಕುಮಾರ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ.

‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜೊತೆಯಾಗಿ ನಿರ್ಮಿಸಿದ್ದು, ಚರಣ್ರಾಜ್ ಸಂಗೀತ ಮತ್ತು ಶಿವಸೇನ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags: