ಬೆಂಗಳೂರು: ಮೂಡಾ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಮೂಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಸದನದಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಬಿಜೆಪಿ ಸದಸ್ಯರು ಗಮನ ಸೆಳೆದಿದ್ದಾರೆ. ಬಿಜೆಪಿ ಶಾಸಕರಾದ ಭಾಗೀರಥಿ ಮುರಳ್ಯ ಹಾಗೂ ವೇದವ್ಯಾಸ ಕಾಮತ್ ಸದನದಲ್ಲಿ ಧರಣಿವೇಳೆ ಹನುಮಾನ್ ಚಾಲೀಸ್ ಪಠಣ ಮಾಡಿದರು. ಈ ವೇಳೆ ಇತರ ಸದಸ್ಯರು ಸಾಥ್ ನೀಡಿದರು.
ಇನ್ನೂ ಈ ವೇಳೆ ಸದನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆರ್‌ಎಸ್‌ಎಸ್ ಶಾಖೆಯ ಪ್ರಾರ್ಥನೆ ಮಾಡಲು ಮುಂದಾದರು. ಇದಕ್ಕೆ ವಿರೋಧ ಪಕ್ಷದ ನಾಯಕ ಬೇಡ ಎಂದು ಸೂಚಿಸಿದರು. ಹೀಗಾಗಿ ಪೂಂಜಾ ಸುಮ್ಮನಾದರು.
ಸರ್ಕಾರದ ಊಟ, ಹಾಸಿಗೆ ನಿರಾಕರಿಸಿದ ವಿಪಕ್ಷಗಳು
ಧರಣಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಕಾರ್ಯದರ್ಶಿ ವಿಶಾಲಾಕ್ಷಿ ಶಾಸಕರಿಗೆ ರಾತ್ರಿ ಊಟದ ಬಗ್ಗೆ ವಿಚಾರಿಸಿದರು. ಈ ವೇಳೆ ಶಾಸಕರು ಹಗರಣದ ಹಣದ ಊಟದ ವ್ಯವಸ್ಥೆ ನಮಗೆ ಬೇಡ ಎಂದರು. ಜೊತೆಗೆ ರಾತ್ರಿಯ ಊಟ ಹಾಗೂ ಹಾಸಿಗೆ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳುವುದಾಗಿ ತಿಳಿಸಿದರು. ಬಳಿಕ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಅವರಿಗೆ ಸದಸ್ಯರಿಗೆ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡುವ ಹೊಣೆ ನೀಡಿದರು.
ಏನಕ್ಕೆ ಧರಣಿ?
ಮೂಡಾ ಹಗರಣ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿಯ ಸದಸ್ಯರು ಸದನದಲ್ಲಿ ಕೇಳಿದರು. ಈ ವೇಳೆ ಬಿಜೆಪಿಯ ನಿಲುವಳಿಯನ್ನು ಸ್ಪೀಕರ್ ಯು.ಟಿ ಖಾದರ್ ತಿರಸ್ಕರಿಸಿದರು. ಇದರಿಂದ ಮಾತಿನ ಚಕಮಕಿ, ಗದ್ದಲ, ಆರೋಪ-ಪ್ರತ್ಯರೋಪ ನಡೆದು ಪ್ರತಿಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಿತ್ತು. ಬಳಿಕ ಅಹೋರಾತ್ರಿ ಧರಣಿ ಘೋಷಣೆ ಮಾಡಿದೆ.