ಮೈಸೂರು: ಮುಡಾ ಅಧ್ಯಕ್ಷ ಕೆ.ಮರಿಗೌಡ ಓರ್ವ ಬಕ್ರಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮುಡಾ ನಿವೇಶನ ದಂಡ ತಪ್ಪಿಸಲು ಪ್ರತಾಪ್ ಸಿಂಹ ವಾಮಮಾರ್ಗ ಅನುಸರಿಸಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರಿಗೌಡ ಗಂಭೀರ ಆರೋಪ ಮಾಡಿದ್ದರು.
ಈ ಬಗ್ಗೆ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಸಿದ್ದರಾಮಯ್ಯನವರಿಗೆ ಸೈಟ್ ವಾಪಸ್ ಕೊಡಿ ಅಂತಾ ಹೇಳಿದ್ದೆ. ಕಾಳಜಿ, ಪ್ರೀತಿ, ಗೌರವದಿಂದ ಸಲಹೆ ಕೊಟ್ಟಿದ್ದೆ. ಸಿಎಂ ಸಿದ್ದರಾಮಯ್ಯ ಕೂಡ ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಮರಿಗೌಡನಂತಹ ಬಕ್ರಾಗಳನ್ನು ಜೊತೆಗಿಟ್ಟುಕೊಂಡಿದ್ದಾರೆ. ಕೆ.ಮರಿಗೌಡ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರನ್ನು ನಿಂದಿಸಿದ್ದ. ಅಂತಹ ವ್ಯಕ್ತಿಯನ್ನು ಮುಡಾ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಮರಿಗೌಡನಂತಹ ತಿಳಿಗೇಡಿ ಬಗ್ಗೆ ನಾನು ಏನೂ ಹೇಳೋದಿಲ್ಲ ಎಂದು ಲೇವಡಿ ಮಾಡಿದರು.
ಇನ್ನೂ ಮುಂದುವರಿದು ಮಾತನಾಡಿದ ಪ್ರತಾಪ್ ಸಿಂಹ ಅವರು, ಸಿಎಂ ಸಿದ್ದರಾಮಯ್ಯರಿಗೆ ಸಲಹೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಬಂದಿರುವ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ಕೊಟ್ಟು ತನಿಖೆ ಮಾಡಿಸಿ ಎಂದು ಸಲಹೆ ನೀಡಿದ್ದಾರೆ.
40 ವರ್ಷಗಳಲ್ಲಿ ಕಳಂಕ ಅಂಟಿಸಿಕೊಳ್ಳದಿರುವ ಸಿದ್ದರಾಮಯ್ಯ ಅವರೇ, ಇದ್ಯಾವುದೋ 16 ಸೈಟಿಗೆ ಏಕೆ ಕಳಂಕ ಅಂಟಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಮುಡಾ ಹಗರಣ ಕುರಿತು ಸಂತೋಷ್ ಹೆಗ್ಡೆ, ಎನ್ ಕುಮಾರ್ ಅವರಂತಹ ದಕ್ಷ ವ್ಯಕ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.