ಎಚ್‌ಡಿ ಕೋಟೆ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯಿತ್ರಿ ಅವರು ಗುರುವಾರ(ಜು.೧೮) ಸರಗೂರು ತಾಲ್ಲೂಕಿನ ನುಗು ಜಲಾಶಯ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.
ಕೇರಳ ಹಾಗೂ ಹೆಚ್.ಡಿ.ಕೋಟೆ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಮತ್ತಷ್ಟು ಹೊರ ಹರಿವಿನ ನೀರು ಪ್ರಮಾಣ ಹೆಚ್ಚಳವಾಗಬಹುದು ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಾಗೃತಿ ಮೂಡಿಸಬೇಕು, ಅಗತ್ಯವಿದ್ದರೆ ಸ್ಥಳಾಂತರ ಮಾಡಲು ಅಗತ್ಯ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು
ಕಬಿನಿ ಜಲಾಶಯದಲ್ಲಿನ ನೀರು ಬಿಡುಗಡೆ ಗೇಟ್ ಕೊಠಡಿಯು ಸ್ವಲ್ಪ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ಕೊಠಡಿಯನ್ನು ದುರಸ್ಥಿ ಮಾಡಿಸಿಕೊಳ್ಳುವಂತೆ ಹಾಗೂ ಜಲಾಶಯದ ಬಳಿ ಸಾರ್ವಜನಿಕರು ಬಾರದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ತುಂಬುಸೋಗೆ ಬಳಿಯ ಸೇತುವೆ ಬಳಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹೆಚ್ಚುವರಿ ನೀರು ಬಿಟ್ಟರೆ ಸೇತುವ ಮುಳುಗುವ ಭೀತಿ ಇದ್ದು, ಸಾರ್ವಜನಿಕರು ಸೇತುವೆ ಬಳಿ ತೆರಳದಂತೆ ಕ್ರಮವಹಿಸಬೇಕು ಎಂದರು.
ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ. ಎಂ.ಕೃಷ್ಣರಾಜು, ಸರಗೂರು ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಕೆ, ಎಚ್.ಡಿ ಕೋಟೆ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ, ಕಾರ್ಯಪಾಲಕ ಅಭಿಯಂತರ ರಂಜಿತ್, ಸಹಾಯಕ ಕಾರ್ಯಪಾಲಕ ಅಭಿಯಂತರ ಗೋವಿಂದ ನಾಯಕ, ಸಹಾಯಕ ನಿರ್ದೇಶಕರು (ಗ್ರಾಉ) ಮಹದೇವಸ್ವಾಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಭಾಕರ್, ಪರಮೇಶ್ ಹಾಗೂ ಇನ್ನಿತರ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಇದ್ದರು.