ಕೊಡಗು : ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜಲಾಶಯಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಸಂಪಾಜೆಯಲ್ಲಿ ಪಯಸ್ವಿನಿ ನದಿ ಸಹ ತುಂಬಿ ಹರಿಯುತ್ತಿದ್ದು, ಸಂಪಾಜೆ ಸಮೀಪದ ಕೊಯನಾಡಿನ ಬಂಡಡ್ಕ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಜಲದಿಗ್ಬಂಧನವಾಗಿದೆ.
ನದಿಯಾಚೆ ಐದು ಕುಟುಂಬಗಳು ವಾಸವಿದ್ದವು. ಆದರೆ ಪ್ರವಾಹಕ್ಕೂ ಮೊದಲೇ ೪ ಕುಟುಂಬಗಳು ಸ್ಥಳಾಂತರವಾಗಿವೆ. ಆದರೆ ನದಿಯಾಚೆ ಮನೆಯಲ್ಲೇ ಉಳಿದಿರುವ ಲಿಂಗಪ್ಪ ಕುಟುಂಬ, ನದಿ ದಾಟಲಾಗದೆ ಕಳೆದ ೫ ದಿನಗಳಿಂದ ಮನೆಯಲ್ಲೆ ಪರದಾಡುತ್ತಿದ್ದಾರೆ. ಕಾಯಿಲೆ ಪೀಡಿತ, ವೃದ್ಧ ತಾಯಿ ಜೊತೆ ಲಿಂಗಪ್ಪ ಮನೆಯಲ್ಲಿ ವಾಸಮಾಡುತ್ತಿದ್ದು, ಪ್ರವಾಹದಿಂದ ನಮ್ಮನ್ನ ರಕ್ಷಣೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ.
ಈಗಾಗಲೇ ಮರ ಬಿದ್ದು ನಿರ್ಮಾಣ ಹಂತದಲ್ಲಿ ಸಂಕದ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಹೀಗಾಗಿ ಊರಿನ ಸಂಪರ್ಕ ಇಲ್ಲದೆ ಲಿಂಗಪ್ಪ ಕುಟುಂಬ ನರಕಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆ ಕುಟುಂಬವನ್ನ ರಕ್ಷಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.





