ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎಡಬಿಡದೇ ಭಾರೀ ಮಳೆ ಸುರಿಯುತ್ತಿದ್ದು, ಇಲ್ಲಿನ ಕುಶಾಲನಗರದ ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಭಾರೀ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಅಧಿಕಾರಿಗಳು ಪ್ರವಾಹದ ಮುನ್ಸೂಚನೆ ನೀಡಿದ್ದಾರೆ.
ಇಂದು ಬೆಳಿಗ್ಗೆ 8 ಗಂಟೆಯಲ್ಲಿ 4,691 ಕ್ಯೂಸೆಕ್ಸ್ ಇದ್ದ ಒಳಹರಿವು 11 ಗಂಟೆ ಹೊತ್ತಿಗೆ 7720 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನ ಒಳಹರಿವು ಏರಿಕೆಯಾಗುತ್ತಿರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ.
ಇನ್ನಷ್ಟು ಭಾರೀ ಮಳೆ ಬೀಳುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ, ಒಳಹರಿವು ಇನ್ನಷ್ಟು ಹೆಚ್ಚಾಗುವ ಸಂಭವ ಇರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಮತ್ತು ಹಾರಂಗಿ ನದಿ ದಂಡೆಯಲ್ಲಿ ವಾಸ ಮಾಡುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.