Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೆಆರ್‌ಎಸ್‌ ಬಳಿ ಟ್ರಯಲ್‌ ಬ್ಲಾಸ್ಟ್‌ಗೆ ಅನುಮತಿ ನೀಡದಿರಿ: ರಾಜಮಾತೆ ಪ್ರಮೋದಾದೇವಿ ಒಡೆಯರ್‌

ಮೈಸೂರು: ಕೆಆರ್‌ಎಸ್‌ ಅಣೆಕಟ್ಟು ಬಳಿ ಯಾವುದೇ ಕಾರಣಕ್ಕೂ ಟ್ರಯಲ್‌ ಬ್ಲಾಸ್ಟ್‌ಗೆ ಅವಕಾಶ ನೀಡಬಾರದು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಆಗ್ರಹಿಸಿದ್ದಾರೆ.

ಟ್ರಯಲ್‌ ಬ್ಲಾಸ್ಟ್‌ಗೆ ಅವಕಾಶ ನಡೆಸಲು ಉದ್ದೇಶಿಸಿರುವ ಬೇಬಿ ಬೆಟ್ಟ ಸರ್ವೇ ನಂಬರ್‌ 1ರಲ್ಲಿರುವ ಅಮೃತ್‌ ಮಹಲ್‌ ಕಾವಲ್‌ನ 1623 ಎಕರೆ 7 ಗುಂಟೆ ಪ್ರದೇಶ ಮೈಸೂರು ಅರಸು ಮನೆತನಕ್ಕೆ ಸೇರಿದ ಖಾಸಗಿ ಆಸ್ತಿಯಾಗಿದೆ. ಇಲ್ಲಿ ಯಾವುದೇ ರೀತಿಯ ಗಣಿ ಚಟುವಟಿಕೆ, ಟ್ರಯಲ್‌ ಬ್ಲಾಸ್ಟ್‌ ಸೇರಿ ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅಣೆಕಟ್ಟು ಸುರಕ್ಷತಾ ಸಮಿತಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಮೈಸೂರು ಸಂಸ್ಥಾನವಿದ್ದ ಸಮಯದಲ್ಲೇ ಭಾರತ ಸರ್ಕಾರ ಈ ಆಸ್ತಿಯನ್ನು ನನ್ನ ಪತಿ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ತಂದೆಗೆ ನೀಡಿದ್ದು, ನನ್ನ ಪತಿ 2013ರ ಡಿಸೆಂಬರ್‌ 10ರಂದು ನಿಧನರಾಗಿದ್ದು, ಆನಂತರ ಈ ಆಸ್ತಿಗೆ ನಾನು ವಾರಸುದಾರಳಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಯವರಿಗೆ ಅರ್ಜಿ ಸಲ್ಲಿಸಿದ್ದರೂ, ನಾನಾ ಕಾರಣಗಳನ್ನು ಹೇಳುತ್ತಲೇ ಇದುವರೆಗೂ ನನ್ನ ಹೆಸರಿಗೆ ಖಾತೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಬೇಬಿಬೆಟ್ಟ ಕಾವಲ್‌ನ ಸರ್ವೇ ನಂಬರ್.‌1ರ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದೇನೆ.

ಎಲ್ಲರ ಪರಿಶ್ರಮದಿಂದ ನಿರ್ಮಾಣ ಮಾಡಿರುವ ಅಣೆಕಟ್ಟೆಯನ್ನು ನಾವೆಲ್ಲಾ ಜೋಪಾನ ಮಾಡಬೇಕಿದ್ದು, ಇದು ನಾಲ್ಕು ಜಿಲ್ಲೆಗಳಲ್ಲಿರುವ ಕುಡಿಯುವ ನೀರಿಗೆ, ಕೃಷಿಗೆ ಪ್ರಮುಖ ಆಧಾರವಾಗಿದೆ. ಅಣೆಕಟ್ಟು ನಿರ್ಮಿಸಿದವರ ಪರಿಶ್ರಮವನ್ನು ಹಾಳುಗೆಡವಬಾರದು. ಸಮಿತಿ ಕೂಡಲೇ ಕ್ರಮ ವಹಿಸಿ ನನಗೆ ಸೇರಿದ ಬೇಬಿಬೆಟ್ಟ ಸರ್ವೇ ನಂಬರ್.‌1ರಲ್ಲಿರುವ 1623 ಎಕರೆ 7 ಗುಂಟೆ ವ್ಯಾಪ್ತಿಯಲ್ಲಿ ಟ್ರಯಲ್‌ ಬ್ಲಾಸ್ಟ್‌ಗೆ ಅನುಮತಿ ನೀಡಬಾರದು ಎಂದು ಕೋರಿದ್ದಾರೆ.

 

 

Tags: