Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಇನ್ನು ಮುಂದೆ ಜೂನ್.‌25 ಸಂವಿಧಾನ ಹತ್ಯಾ ದಿವಸ್:‌ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಇನ್ನು ಮುಂದೆ ದೇಶದಲ್ಲಿ ಜೂನ್.‌25ನ್ನು ಸಂವಿಧಾನ ಹತ್ಯಾ ದಿವಸ ಎಂದು ಆಚರಿಸಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಜೂನ್.‌25, 1975 ರಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ ಇನ್ನು ಮುಂದೆ ಈ ದಿನವನ್ನು ಸಂವಿಧಾನ ಹತ್ಯಾ ದಿವಸವನ್ನಾಗಿ ಆಚರಿಸಲಾಗುವುದು ಎಂದು ಅಮಿತ್‌ ಶಾ ಘೋಷಣೆ ಮಾಡಿದ್ದಾರೆ.

ಅಮಾನವೀಯ ಕೃತ್ಯ ಮತ್ತು ತುರ್ತು ಪರಿಸ್ಥಿತಿಯಿಂದಾಗಿ ಚಿತ್ರಹಿಂಸೆಗೆ ಒಳಗಾದ ಸಂತ್ರಸ್ತರಿಗಾಗಿ ಈ ಸಂವಿಧಾನ್‌ ಹತ್ಯಾ ದಿವಸ್‌ ಸಮರ್ಪಿತವಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಜೂನ್.‌25, 1975ರಂದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ದೇಶದಲ್ಲಿ ಪ್ರಜಾಪ್ರಭುತ್ವದ ವಿರುದ್ಧವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಈ ಸಂಬಂಧ ಎರಡು ವರ್ಷಗಳ ಕಾಲ ನಾಗರಿಕರ ಹಕ್ಕುಗಳನ್ನು ನಿರಾಕರಿಸಲಾಯಿತು. ಈ ವೇಳೆ ಸರ್ಕಾರದ ಅಧಿಕಾರದ ದುರುಪಯೋಗವನ್ನು ಪ್ರಶ್ನಿಸಿದ ಜನರು ಅನೇಕ ದೌರ್ಜನ್ಯಗಳಿಗೆ ಒಳಗಾಗಿದ್ದರು.

ಇದೆಲ್ಲದರ ನಡುವೆ ಮಾಧ್ಯಮಗಳಿಗೂ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಇವರನ್ನು ಸ್ಮರಿಸುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಘೋಷಣೆಯಾದ ಜೂನ್.‌25ನ್ನು ಸಂವಿಧಾನ ಹತ್ಯಾ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಂತಹ ಅಧಿಕಾರ ದುರುಪಯೋಗವನ್ನು ಯಾವುದೇ ರೀತಿಯಲ್ಲಿ ಬೆಂಬಲಿಸದಿರಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಜೂನ್.‌25, 1975 ರಂದು, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸರ್ವಾಧಿಕಾರದ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಹಕ್ಕುಗಳ ವಿರುದ್ಧವಾಗಿ ಆದೇಶ ಹೊರಡಿಸಿದ್ದರು.

ಈ ವೇಳೆ ಲಕ್ಷಾಂತರ ಜನರನ್ನು ಜೈಲಿಗೆ ಕಳಿಸಲಾಯಿತು. ಇದಲ್ಲದೇ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲಾಯಿತು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಪ್ರತಿ ವರ್ಷ ಜೂನ್.‌25ನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ನಿರ್ಧರಿಸಿದೆ ಎಂದು ಅಧಿಸೂಚನೆ ಪತ್ರದ ಜೊತೆಗೆ ಬರೆದುಕೊಂಡಿದ್ದಾರೆ.

Tags: