ಬೆಂಗಳೂರು: ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಹಾಗೂ ರಾಜ್ಯದ ಮುಂದಿನ ನಡೆ ಏನು ಎಂಬ ಕುರಿತು ಜುಲೈ 14 ರಂದು ಸರ್ವಪಕ್ಷ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು(ಜು.೧೨) ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಈ ಬಾರಿ ವಾಡಿಕೆ ಮಳೆ ಆಗುವುದೆಂಬ ಹವಾಮಾನ ಮುನ್ಸೂಚನೆ ಇದ್ದರೂ ಈ ವರೆಗೆ ಶೇ. 28 ರಷ್ಟು ಒಳಹರಿವಿನ ಕೊರತೆ ಇದೆ. ಇದನ್ನು ಸಿಡಬ್ಲ್ಯೂಆರ್‌ಸಿ ಸ್ಪಷ್ಟವಾಗಿ ನಮ್ಮ ನಿಲುವನ್ನು ಹೇಳಿದ್ದೆವು. ಜೊತೆಗೆ ಜುಲೈ ಅಂತ್ಯದವರೆಗೆ ಯಾವುದೇ ತೀರ್ಮಾನ ಮಾಡದಂತೆ ಮನವಿ ಮಾಡಿದ್ದೆವು. ಆದರೂ ಸಿಡಬ್ಲ್ಯೂಆರ್‌ಸಿ ಅವರು ಜುಲೈ 12 ರಿಂದ ಪ್ರತಿ ದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ.
ಸರ್ಕಾರ ಈ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯ ಇಂದಿನ ಸಭೆಯಲ್ಲಿ ವ್ಯಕ್ತವಾಯಿತು ಎಂದರು.
ಜುಲೈ 14 ರಂದು ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಲಾಯಿತು. ಕರ್ನಾಟಕದ ನೀರಿನ ವಿಚಾರದಲ್ಲಿ ಎಲ್ಲ ಪಕ್ಷದವರೂ ಒಟ್ಟಾಗಿದ್ದೇವೆ. ಆದ್ದರಿಂದ ಸರ್ವಪಕ್ಷ ಸಭೆ ನಡೆಸಲಾಗುವುದು ಎಂದರು.
ಕೇಂದ್ರ ಮಂತ್ರಿಗಳು, ಕಾವೇರಿ ಭಾಗದ ಲೋಕಸಭೆ, ರಾಜ್ಯಸಭೆ ಸದಸ್ಯರು ಮತ್ತು ಶಾಸಕರನ್ನು ಸಹ ಸಭೆಗೆ ಆಹ್ವಾನಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಮುಂದಿನ ಹೆಜ್ಜೆಯನ್ನು ತೀರ್ಮಾನಿಸಲಾಗುವುದು ಎಂದರು.
ಬಿಳಿಗುಂಡ್ಲುವಿನಲ್ಲಿ ಅಳತೆ ಮಾಡುವಾಗ, ಕಬಿನಿ ಅಣೆಕಟ್ಟಿನ ಒಳಹರಿವಿನಷ್ಟು ಕ್ಯೂಸೆಕ್ಸ್‌ನಷ್ಟು ನೀರನ್ನು ತಮಿಳು ನಾಡಿಗೆ ಬಿಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾವೇರಿ ಜಲಾನಯನ ಪ್ರದೇಶದ ಎಲ್ಲಾ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಮಳೆ ಕೊರತೆಯನ್ನು ಗಮನದಲ್ಲಿರಿಸಿ ಜುಲೈ ಅಂತ್ಯದವರೆಗೆ ಕಾಯಲು ಮನವಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.