ಮೈಸೂರು :ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಸದರಾದ ಬಳಿಕ ಮೊದಲ ಬಾರಿಗೆ ಚಾಮುಂಡಿಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ, ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.
ಇನ್ನು ಮುಂಜಾನೆಯಿಂದಲೂ ಕೂಡ ತಾಯಿ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಬರುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಬರುವಂತ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಉಪಹಾರ, ಪ್ರಸಾದ, ವಾಹನಗಳ ನಿಲುಗಡೆ, ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನ ಒದಗಿಸಲಾಗಿದೆ.
ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ಆಗಮಿಸುವ ಭಕ್ತರಿಗಾಗಿ ಲಲಿತಮಹಲ್ ಪ್ಯಾಲೇಸ್ ಬಳಿಯಿರುವ ಮೈದಾನದಿಂದ ಚಾಮುಂಡಿಬೆಟ್ಟಕ್ಕೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಕೇವಲ ಶುಕ್ರವಾರ ಮಾತ್ರ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಚಾಮುಂಡೆಶ್ವರಿ ದೇವಿ ದರ್ಶನಕ್ಕೆ ಪಾಸ್ ವ್ಯವಸ್ಥೆ ರದ್ದು ಮಾಡಲಾಗಿದೆ. ಜನರು ಸರತಿ ಸಾಲಿನಲ್ಲಿ ದೇಗುಲ ಪ್ರವೇಶಿಸಲು ಬ್ಯಾರಿಕೇಡ್ ಅಳವಡಿಸಲಾಗಿದೆ. ಅಲ್ದೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮಾರಾ ಕೂಡ ಅಳವಡಿಸಲಾಗಿದೆ.





