ಮೈಸೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ನೋಂದಾಯಿಸಿಕೊಂಡಿರುವ ಫಲಾನುಭವಿಗಳು ತಾವು ವ್ಯಾಸಂಗ ಮಾಡುತ್ತಿಲ್ಲ, ಸ್ವಯಂ ಉದ್ಯೋಗಿ ಅಲ್ಲ, ನಿರುದ್ಯೋಗಿ ಎಂದು ಪ್ರತಿ ತಿಂಗಳು ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.
ಯುವ ನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಹಣ ಪಡೆಯಬೇಕಾದರೆ ಪ್ರತಿ ತಿಂಗಳು 25ನೇ ದಿನಾಂಕದೊಳಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್‌ಸೈಟ್ ಮೂಲಕ ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
2023 ರ ಸಾಲಿನಲ್ಲಿ ತೇರ್ಗಡೆಯಾದಂತಹ ಅಭ್ಯರ್ಥಿಗಳಿಗೆ ಯುವ ನಿಧಿ ಕಾರ್ಯಕ್ರಮದ ಅಡಿಯಲ್ಲಿ ಪದವಿಧರರಿಗೆ ಮಾಸಿಕ ರೂ.3000 ಹಾಗೂ ಡಿಪ್ಲೋಮಾದಾರರುಗಳಿಗೆ ಮಾಸಿಕ ರೂ.1500 ಗಳನ್ನು ಸರ್ಕಾರದ ವತಿಯಿಂದ ನೀಡುತ್ತಲಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ಅರ್ಹ ನಿರುದ್ಯೋಗ ಅಭ್ಯರ್ಥಿಗಳು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಜೋಡಣೆಯ ಬ್ಯಾಂಕ್‌ಖಾತೆಯನ್ನು ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ.





