Mysore
18
few clouds

Social Media

ಭಾನುವಾರ, 29 ಡಿಸೆಂಬರ್ 2024
Light
Dark

ಕಿರು ರಂಗಮಂದಿರಕ್ಕೆ ನವ ವಿನ್ಯಾಸ; ಮಾಸಾಂತ್ಯದಲ್ಲಿ ಕಲಾ ಪ್ರದರ್ಶನಕ್ಕೆ ಪುನಃ ತೆರೆದುಕೊಳ್ಳಲಿದೆ ರಂಗಕುಟೀರ

ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಗಳಿಸಿ ರುವ ಮೈಸೂರಿನ ಕಲಾ ಚಟುವಟಿಕೆಗಳ ಕೇಂದ್ರಗಳಲ್ಲಿ ಒಂದಾದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಧ್ವನಿ ಮತ್ತು ಬೆಳಕಿನ ವಿನ್ಯಾಸಕ್ಕೆ ಹೊಸ ಸ್ಪರ್ಶ ನೀಡಲಾಗು ತ್ತಿದ್ದು, ಮಾಸಾಂತ್ಯಕ್ಕೆ ಹೊಸ ರೂಪದಲ್ಲಿ ಕಂಗೊಳಿಸಲಿದೆ. ಕಿರು ರಂಗಮಂದಿರದಲ್ಲಿ ಧ್ವನಿವರ್ಧಕ, ಬೆಳಕಿನ ವಿನ್ಯಾಸ ಅಸಮರ್ಪಕವಾಗಿವೆ ಎಂಬ ಆರೋಪ ಕೇಳಿ ಬಂದಿತ್ತು. ಲೈಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿರಲಿಲ್ಲ. ವೈರಿಂಗ್ ತೊಂದರೆಯೂ ಉಂಟಾಗಿತ್ತು. ರಂಗ ಪ್ರದರ್ಶನದ ಅಗತ್ಯಕ್ಕೆ ತಕ್ಕಂತೆ ನವೀಕರಣ ಮಾಡು ವಂತೆ ಕಲಾವಿದರು, ರಂಗತಜ್ಞರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ೫೯ ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಂಡಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ನಿರ್ಮಿತಿ ಕೇಂದ್ರವು ಈ ಕೆಲಸವನ್ನು ನಿರ್ವಹಿಸುತ್ತಿದೆ. ನವೀಕರಣ ಹಿನ್ನೆಲೆಯಲ್ಲಿ ಸದ್ಯ ಕಿರುಮಂದಿರದಲ್ಲಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.

ಶೌಚಾಲಯ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಕೆ

ಕಲಾಮಂದಿರದಲ್ಲಿನ ಶೌಚಾಲಯಗಳು ದುಸ್ಥಿತಿಯಲ್ಲಿರುವುದರಿಂದ ಇದರ ನವೀಕರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೌಚಾಲಯ ತುಂಬಾ ಹಳೆಯದಾಗಿದ್ದು, ಗೋಡೆಗಳ ಟೈಲ್ಸ್ ಹಾಗೂ ಕಮೋಡ್ ಹೊಳಪು, ಮೆರುಗು ಕಳೆದುಕೊಂಡಿದೆ. ಸ್ವಚ್ಛ ಮಾಡಿದ ಬಳಿಕವೂ ಕೆಟ್ಟ ವಾಸನೆ ಬರುತ್ತಿದೆ. ಹೀಗಾಗಿ, ಶೌಚಾಲಯಗಳನ್ನು ನವೀಕರಣ ಮಾಡಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ.

ಸಲಹೆ, ಸೂಚನೆಗಳನ್ನು ಆಲಿಸಿ ಕಾಮಗಾರಿ ನಡೆಸುತ್ತಿರುವ ಇಲಾಖೆ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನವಿ ಮೇರೆಗೆ ಕಿರು ರಂಗಮಂದಿರದ ಕಾಮಗಾರಿಯನ್ನು ಕೆಲವು ರಂಗಕರ್ಮಿಗಳು, ಕಲಾವಿದರು, ಧ್ವನಿ ಬೆಳಕು ವಿನ್ಯಾಸಗಾರರು ವೀಕ್ಷಿಸಿ, ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಕಾಮಗಾರಿ ನಡೆದಿದ್ದು, ಅವರ ಸಲಹೆಗಳನ್ನು ಸಾಧ್ಯವಾದಷ್ಟು ಪಾಲನೆ ಮಾಡಲಾಗಿದೆ ಎಂದು ಡಾ. ಎಂ. ಡಿ. ಸುದರ್ಶನ್ ತಿಳಿಸಿದ್ದಾರೆ.

ಕಲಾಮಂದಿರ ಸಮಗ್ರ ಅಭಿವೃದ್ಧಿ ಆಗಬೇಕು…

ಕಲಾಮಂದಿರ ನಿರ್ಮಾಣವಾಗಿ ೩೯ ವರ್ಷಗಳು ಕಳೆದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬರುವ ಅಲ್ಪ ಅನುದಾನ ದಲ್ಲಿ ಆಯಾ ಕಾಲಘಟ್ಟದಲ್ಲಿ ವೇದಿಕೆ, ಗೋಡೆ ಸುಣ್ಣಬಣ್ಣ, ಉದ್ಯಾನ, ಬೆಳಕು ಮತ್ತು ಧ್ವನಿ, ಆಸನ ಸೇರಿದಂತೆ ಕೆಲವೊಂದು ಕಾಮಗಾರಿಗಳು ನಡೆದಿವೆ. ಹಳೇ ಕಟ್ಟಡ ವಾಗಿರುವುದರಿಂದ ನೀರಿನ ಸೋರಿಕೆ ಸಮಸ್ಯೆ ಇದೆ. ಕಬ್ಬಿಣದ ಪೈಪ್ ಬಳಸಿರು ವುದರಿಂದ ತುಕ್ಕು ಹಿಡಿದಿವೆ. ಕಲಾಮಂದಿರದ ವಿಶಾಲ ಚಾವಣಿಯಲ್ಲಿ ಟೈಲ್ಸ್‌ಗಳನ್ನು ಅಳವಡಿಸಿದ್ದು, ಮಳೆ ನೀರು ಸೋರಿಕೆ ಆಗುತ್ತಿದೆ. ಇದನ್ನು ದುರಸ್ತಿ ಮಾಡಬೇಕಿದೆ.

ಏನೇನು ಕಾಮಗಾರಿಗಳು ನಡೆಯುತ್ತಿವೆ ಗೊತ್ತಾ?

ನಾಟಕ ಪ್ರದರ್ಶನ, ಉತ್ಸವ, ಕಲಾ ಪ್ರದರ್ಶನ, ಮಹನೀಯರ ಜಯಂತಿಗಳು ಸೇರಿದಂತೆ ಹಲವು ಚಟುವಟಿಕೆಗಳ ಮೂಲಕವೂ ಗಮನ ಸೆಳೆದಿರುವ ಕಿರುರಂಗಮಂದಿರದಲ್ಲಿ ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ವೇದಿಕೆ, ಪರದೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಚೆನ್ನಾಗಿರುವ ಹಳೆಯ ಲೈಟ್ ಉಳಿಸಿಕೊಂಡು ಹೊಸದಾಗಿ ಅವಶ್ಯಕತೆಯಿರುವ ಲೈಟ್ ಖರೀದಿ ಮಾಡ ಲಾಗಿದೆ. ಎಫ್‌ಒಎಚ್ (ಫ್ರಂಟ್ ಆಫ್ ಹೌಸ್) ಬಾರ್ ತಾಂತ್ರಿಕವಾಗಿ ಸರಿ ಇರಲಿಲ್ಲ. ವೇದಿಕೆಯ ಮೇಲೆ ಲೈಟ್ ಬಾರ್ ಎರಡು ಮಾತ್ರ ಇದ್ದವು. ಇದೀಗ ಅದನ್ನು ೫ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಪ್ರತಿಯೊಂದು ಲೈಟ್ ಬಾರ್‌ನಲ್ಲಿ ಯೂ ೭ ರಿಂದ ೮ ಲೈಟ್‌ಗಳನ್ನು ಅಳವಡಿಸಲಾಗಿರುತ್ತದೆ. ೩ ಲೈಟ್ ಬಾರ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಸಲಿರುವುದರಿಂದ ಒಟ್ಟಾರೆ ೩೦ ಲೈಟ್ ಗಳು ಹೆಚ್ಚಾಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ. ಡಿ. ಸುದರ್ಶನ್ ತಿಳಿಸಿದರು.

ಈಗಾಗಲೇ ಮಂಜೂರಾಗಿರುವ ೫೯ ಲಕ್ಷ ರೂ. ವೆಚ್ಚದಲ್ಲಿ ಕಿರುರಂಗ ಮಂದಿದ ಧ್ವನಿ ಮತ್ತು ಬೆಳಕಿನ ವಿನ್ಯಾಸ ಕೆಲಸ ನಡೆಯುತ್ತಿದೆ. ಜುಲೈ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣ ಗೊಳ್ಳಲಿದೆ. ಕಲಾಮಂದಿರದಲ್ಲಿನ ಶೌಚಾಲಯ ಗಳು ದುಸ್ಥಿತಿಯಲ್ಲಿರುವುದರಿಂದ ಇದರ ನವೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. -ಡಾ. ಎಂ. ಡಿ. ಸುದರ್ಶನ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು.

 

 

 

Tags: