Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಬಹುತೇಕ ಖಚಿತ..?

ಬೆಂಗಳೂರು : ಉಪಚುನಾವಣೆಗೂ ಮುನ್ನವೇ ಚನ್ನಪಟ್ಟಣ ಕ್ಷೇತ್ರದ ಅಖಾಡ ರಂಗೇರುತ್ತಿದೆ. ಒಂದು ಕಡೆ ಈಗಾಗಲೇ ಕಾಂಗ್ರೆಸ್‌ ಚುನಾವಣೆಗೆ  ತಯಾರಿ ನಡೆಸಿ ಕ್ಷೇತ್ರದಲ್ಲಿ ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮಗಳನ್ನು ಮಾಡಿ ಮತದಾರರನ್ನ ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಮತ್ತೊಂದು ಕಡೆ ಮೈತ್ರಿ ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.

ಎಚ್‌ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ  ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಉಪಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳಿಂದ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಇದರ ಮಧ್ಯೆ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಸ್ಪರ್ಧೆ ಮಾಡುತ್ತದೆಯೋ ಅಥವಾ ಜೆಡಿಎಸ್‌ ಸ್ಪರ್ಧೆ ಮಾಡುತ್ತದೆ ಎಂಬ ಕುತೂಹಲ ಎರಡು ಪಕ್ಷಗಳ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮೂಡುತ್ತಿದೆ. ಆದರೆ ನಿನ್ನೆಯ ಬೆಳವಣಿಗೆ ನೋಡಿದರೆ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ.

ಇದಕ್ಕೆ ಪುಷ್ಠಿ ಕೊಡುವಂತೆ ಜುಲೈ ೮ ರಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಮಾಡಿದ್ದಾರೆ. ಸಭೆಯಲ್ಲಿ ಉಪಚುನಾವಣೆಯ ಸ್ಪರ್ಧೆ ಮತ್ತು ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮುಕ್ತವಾಗಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಇನ್ನು ಇದೇ ಸಭೆಯಲ್ಲಿ ಚನ್ನಪಟ್ಟಣದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಕಾರ್ಯಕರ್ತರು ಮತ್ತು ಮುಖಂಡರು ಒತ್ತಡ ಹಾಕಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಉಪಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಎನ್‌ ಡಿಎ ಅಭ್ಯರ್ಥಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಿಖಿಲ್‌ ಕೆಲಸ ಮಾಡುತ್ತಾರೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ಕೊಟ್ಟಿದ್ದಾರೆ.

ಮತ್ತೊಂದು ಕಡೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿರುವ ಸಿ.ಪಿ ಯೋಗೇಶ್ವರ್‌ ಸಹ ಕುಮಾರಸ್ವಾಮಿ ಅವರ ಗ್ರೀನ್‌ ಸಿಗ್ನಲ್‌ ಗಾಗಿ ಕಾಯುತ್ತ ಕುಳಿತ್ತಿದ್ದಾರೆ. ಇದರ ಬೆನ್ನಲ್ಲೆ ಯಾರೇ ಅಭ್ಯರ್ಥಿ ಆದರೂ ಅಥವಾ ಸಿ.ಪಿ ಯೋಗೇಶ್ವರ್‌ ಅಭ್ಯರ್ಥಿ ಆದ್ರೂ ಬೆಂಬಲ ನೀಡುವಂತೆ ಕುಮಾರಸ್ವಾಮಿ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಸಿ.ಪಿ. ಯೋಗೇಶ್ವರ್‌ ಸ್ಪರ್ಧೆ ಮಾಡುವುದಾದರೆ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧೆ ಮಾಡಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಇದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಲಾಭ ಆಗುವ ಚಾನ್ಸಸ್‌ ಇರುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಮುಖಂಡರು ಎಚ್‌ ಡಿಕೆ ಗೆ ತಿಳಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಒಮ್ಮೆ ಸಿಪಿ ಯೋಗೇಶ್ವರ್‌ ನನ್ನ ಭೇಟಿ ಮಾಡಿ ಅವರೊಟ್ಟಿಗೆ ಮಾತುಕತೆ ನಡೆಸಿ ಎಂದು ಸಲಹೆ ಕೊಟ್ಟಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದರೆ ಚನ್ನಪಟ್ಟಣದಿಂದ ಜೆಡಿಎಸ್‌ ಅಭ್ಯರ್ಥಿ ಮತ್ತೊಮ್ಮೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಶೀಘ್ರದಲ್ಲೆ ಎಚ್‌ ಡಿ ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್‌ ರನ್ನ ಭೇಟಿ ಮಾಡಿ ಅಭ್ಯರ್ಥಿ ಹೆಸರು ಫೈನಲ್‌ ಮಾಡುವ ಸಾಧ್ಯತೆ ಇದೆ.

Tags: