ಕೊಡಗು: ನೆರೆಯ ರಾಜ್ಯ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ರಾಜ್ಯದ ಗಡಿ ಜಿಲ್ಲೆ ಕೊಡಗಿನಲ್ಲಿ ಫುಲ್ ಟೆನ್ಷನ್ ಶುರುವಾಗಿದೆ.
ಕೇರಳದ ತ್ರಿಶೂರ್ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. 14ನೇ ವಾರ್ಡ್‌ನ ವೆಲಿಯೆಂತರ ಕಟ್ಟಲಪುಳಬಾಬು ಎಂಬುವವರ ಮಾಲೀಕತ್ವದ ಹಂದಿಗಳಲ್ಲಿ ರೋಗ ದೃಢಪಟ್ಟಿದೆ. ರೋಗವು ಹರಡುವ ಕಾರಣದಿಂದಾಗಿ ಜಮೀನೊಂದರಲ್ಲಿ 310 ಹಂದಿಗಳನ್ನು ಕೊಲ್ಲಲಾಗಿದೆ.
ನೆರೆ ರಾಜ್ಯದಲ್ಲಿ ಹಂದಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈಗ ರಾಜ್ಯದ ಗಡಿ ಜಿಲ್ಲೆ ಕೊಡಗಿನಲ್ಲಿಯೂ ಆತಂಕ ಸೃಷ್ಟಿಯಾಗಿದೆ.
ಕೊಡಗು ಕೇರಳಕ್ಕೆ ಹೊಂದಿಕೊಂಡಂತಿರುವ ಗಡಿ ಜಿಲ್ಲೆಯಾಗಿರುವುದರಿಂದ ಕೇರಳದಲ್ಲಿ ಯಾವುದೇ ಸಾಂಕ್ರಾಮಿಕಗಳು ಹರಡಿದರೆ, ಜಿಲ್ಲೆಯಲ್ಲಿ ತಲೆನೋವು ಆರಂಭವಾಗುತ್ತದೆ. ಕೋವಿಡ್ ಸೋಂಕು ಸೇರಿದಂತೆ ಪ್ರಾಣಿಗಳಲ್ಲಿ ಕಂಡು ಬರುವ ಹಲವು ಖಾಯಿಲೆಗಳು ಕೇರಳದಿಂದಲೇ ಕೊಡಗಿಗೆ ಕಾಲಿಟ್ಟಿವೆ. ಹೀಗಾಗಿ ಕೇರಳದ ಯಾವುದೇ ಜಿಲ್ಲೆಯಲ್ಲಿ ರೋಗ ಕಂಡು ಬಂದರೂ ಜಿಲ್ಲೆಯ ಜನ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಸದ್ಯ ಕೇರಳದ ತ್ರಿಶೂರು ಜಿಲ್ಲೆಯಲ್ಲಿ ಹಂದಿ ಜ್ವರ ಕಾಣಿಸಿಕೊಂಡಿರುವ ಫಾರ್ಮ್‌ನಿಂದ 1 ಕಿ.ಮೀ ವ್ಯಾಪ್ತಿಯ ಎಲ್ಲಾ ಫಾರ್ಮ್‌ಗಳಲ್ಲಿ ತಪಾಸಣೆ ನಡೆಯುತ್ತಿದೆ. ಇದಲ್ಲದೇ 10 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಈ ವ್ಯಾಪ್ತಿಯಿಂದ ಹಂದಿಗಳು ಮತ್ತು ಹಂದಿ ಮಾಂಸದ ಸಾಗಣೆಗೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡು ಪಕ್ಕದ ಕಣ್ಣೂರು ಜಿಲ್ಲೆಯವರೆಗೂ ವ್ಯಾಪಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಹಂದಿ ಸಾಕಣೆದಾರರಿಗೆ ಜಾಗೃತಿ ಮೂಡಿಸಿತ್ತು.
ಈ ಹಿನ್ನೆಲೆಯಲ್ಲಿ ಮುಂದಿನ ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿದ್ದು, ಇದೀಗ ಕೇರಳದಲ್ಲಿ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಆದೇಶ ಬಂದರೆ ತಕ್ಷಣ ಲಸಿಕೆ ನೀಡಲು ಮುಂದಾಗುವ ಸಾಧ್ಯತೆಯಿದೆ.