Mysore
22
broken clouds
Light
Dark

ಆಂದೋಲನಕ್ಕೆ 52ರ ಹರಯ: ಜನಸಾಮಾನ್ಯರ ʼಆಂದೋಲನʼವನ್ನು ಬೆಳೆಸಿದ ಜನತೆಗೆ ಕೋಟಿ ನಮನ

ನಿಮ್ಮ ಮೆಚ್ಚಿನ ‘ಆಂದೋಲನ’ ದಿನಪತ್ರಿಕೆ ಈಗ 52 ವರ್ಷಗಳನ್ನು ಪೂರೈಸಿ 53ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. 1972ರಲ್ಲಿ ಧಾರವಾಡದಲ್ಲಿ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ಆರಂಭಿಸಿದ ಪತ್ರಿಕೆಗೆ ಇದ್ದದ್ದು ಒಂದೇ ಗುರಿ. ಸಮಾಜದಲ್ಲಿ ಧ್ವನಿ ಇಲ್ಲದವರ ದನಿಯಾಗುವುದು. ಚಳವಳಿಗಳ ಮಡಿಲಲ್ಲೇ ಬೆಳೆದ ‘ಆಂದೋಲನ’ಕ್ಕೆ ಸದಾ ಜನಪರ ಚಿಂತನೆಗಳಿಗೆ ಕಿವಿಯಾಗಿ, ನೋವುಗಳ ಪರಿಹಾರಕ್ಕೆ ಧ್ವನಿಯಾಗಿ ಮೌಲ್ಯಭರಿತ ಸುದ್ದಿಗಳನ್ನು ಪ್ರಕಟಿಸುವುದೇ ಏಕೈಕ ಗುರಿಯಾಗಿದೆ. ಅಷ್ಟೇ ಅಲ್ಲದೆ, ವ್ಯಕ್ತಿಗತ ಅನ್ಯಾಯವಾದರೂ, ಸಾಮೂಹಿಕವಾಗಿ ದೌರ್ಜನ್ಯ ನಡೆದರೂ ಪತ್ರಿಕೆಯು ಸಂತ್ರಸ್ತರ ಪರವಾಗಿ ನಿಂತು ಚಿಕಿತ್ಸಕ ದೃಷ್ಟಿಯಿಂದ ಸುದ್ದಿಗಳನ್ನು ಬಿತ್ತರಿಸುತ್ತಾ ಬಂದಿದೆ. 52 ವರ್ಷಗಳ ಸುದೀರ್ಘ ಪಯಣದಲ್ಲಿ ಇಂತಹ ಅನೇಕ ಪ್ರಕರಣಗಳಿಗೆ ‘ಪತ್ರಿಕೆ’ ಮಿಡಿದಿದೆ. ನೊಂದವರಿಗೆ ನ್ಯಾಯ ಒದಗಿಸುವ ಹೋರಾಟಕ್ಕೆ ವೇದಿಕೆಯಾಗಿದೆ.

ಮೈಸೂರು ಭಾಗದ ಜನರ ಸಮಸ್ಯೆಗಳನ್ನು ಅಽಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಅವರ ಕಣ್ತೆರೆಸುವ ಕೆಲಸವನ್ನು ಪತ್ರಿಕೆ ನಿರಂತರವಾಗಿ ಮಾಡುತ್ತಾ ಬಂದಿದೆ. ಅದರಲ್ಲಿಯೂ ಪ್ರಮುಖವಾಗಿ ವಿಕ್ರಾಂತ್ ಟೈರ್ಸ್ ಕಾರ್ಖಾನೆ ಕಾರ್ಮಿಕ ಸತ್ಯದೇವ್ ಕೊಲೆ ಪ್ರಕರಣ, ಹಂಗರಹಳ್ಳಿ ಜೀತ ಪ್ರಕರಣ ಮತ್ತು ಜಾತಿ ದಳ್ಳುರಿಯಿಂದ ಬೆಂದು ಹೋದ ಬದನವಾಳು ದುರಂತದ ಸಂದರ್ಭಗಳಲ್ಲಿ ಪ್ರಾದೇಶಿಕ ಪತ್ರಿಕೆಯಾಗಿಯೂ ತಳೆದ ದಿಟ್ಟ ನಿಲುವು ‘ಆಂದೋಲನ’ದ ಬದ್ಧತೆಗೆ ಸಾಕ್ಷಿಯಾಗಿದೆ. ಇಂದಿಗೂ ಈ ಕೈಂಕರ್ಯವನ್ನು ಮುಂದುವರಿಸುತ್ತಾ ಬಂದಿದೆ. ಅದಕ್ಕೆ ಕಾರಣ ‘ಆಂದೋಲನ’ದ ಅಂತರಾಳದಲ್ಲಿ ಇರುವ ತಾಯ್ತನದ ಭಾವನೆ ಎಂದರೆ ಉತ್ಪ್ರೇಕ್ಷೆಯಲ್ಲ.

ಮೂಲಸೌಕರ್ಯಗಳಿಲ್ಲದೆ ಹೀನಾಯ ಸ್ಥಿತಿಯಲ್ಲಿ ಜೀವನವನ್ನು ನಡೆಸುತ್ತಿರುವ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ನಟ್ಟಡವಿಯಲ್ಲಿರುವ ಇಂಡಿಗನತ್ತ, ಮೆಂದಾರೆ ಹಾಗೂ ಇತರ ಗ್ರಾಮಗಳ ದಾರುಣ ಚಿತ್ರಣವನ್ನು ಸರಣಿ ರೂಪದಲ್ಲಿ ಪ್ರಕಟಿಸಿ, ಆ ಜನರ ಕಣ್ಣೀರ ಬದುಕಿನ ಕಣ ಕಣವನ್ನೂ ‘ಆಂದೋಲನ’ವು ಅಕ್ಷರ ರೂಪದಲ್ಲಿ ತೆರೆದಿಟ್ಟು, ಆ ಮೂಲಕ ಜನಪ್ರತಿನಿಽಗಳು ಮೂಲ ಸೌಕರ್ಯವನ್ನು ಒದಗಿಸಲು ಮುಂದಾಗುವಂತೆ ನೋಡಿಕೊಂಡಿದ್ದು ಪತ್ರಿಕೆಯ ಬದ್ಧತೆಗೆ ಇತ್ತೀಚಿನ ನಿದರ್ಶನವಾಗಿದೆ. ಹೀಗೆ ಪತ್ರಿಕೆಯು ಸದಾ ಕಾಲ ನೊಂದವರ, ಶೋಷಿತರ ದನಿಯಾಗಿ ಜನಸಾಮಾನ್ಯರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರವಾಗಿದೆ.

ಕಳೆದ 5 ದಶಕಗಳಿಂದ ಹಳೇ ಮೈಸೂರು ಭಾಗದ ಜನರ ಧ್ವನಿಯಾಗಿ, ಸ್ಥಳೀಯ ರಾಜಕೀಯ, ಹೋರಾಟಗಳ ಬೆಳವಣಿಗೆಗಳನ್ನು ಒದಗಿಸುವ ಮೂಲಕ ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿ ‘ಆಂದೋಲನ’ ಹೊರಹೊಮ್ಮಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪತ್ರಿಕೆಯು ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಸಾಹಿತ್ಯ, ಸಂಸ್ಕ ತಿ, ಕಲೆ, ಶಿಕ್ಷಣ, ಕ್ರೀಡೆ, ಸಹಕಾರ, ಪ್ರಗತಿಪರ

ಚಳವಳಿ ಮೊದಲಾದ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಕನ್ನಡ ನೆಲ, ಜಲ, ಭಾಷಾ ಹೋರಾಟಗಳ ಸಂದರ್ಭದಲ್ಲಿ ಕೂಡ ಪತ್ರಿಕೆ ಮಹತ್ವದ ಪಾತ್ರವಹಿಸಿದೆ. ಇದಲ್ಲದೆ, ಬಹಳ ಸೂಕ್ಷ್ಮವಾಗಿ ಸಮಾಜವನ್ನು ಗಮನಿಸುತ್ತಾ, ಸಮಾಜದಲ್ಲಿ ವೈಚಾರಿಕ ಪ್ರಜ್ಞೆಯಿಂದ ಸಮ ಸಮಾಜ ನಿರ್ಮಾಣದ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ಬೆಂಬಲಿಸುತ್ತಾ ಬಂದಿದೆ. ಹಾಗಾಗಿ ‘ಆಂದೋಲನ’ ಎಲ್ಲ ವರ್ಗಗಳ ಜನರ ಪ್ರೀತಿಪಾತ್ರ ಪತ್ರಿಕೆಯಾಗಿ ಬೆಳೆದಿದೆ. ‘ಆಂದೋಲನ’ ಎಂದಾಕ್ಷಣ ‘ಅದು ನಮ್ಮ ಪತ್ರಿಕೆ’ ಎಂಬ ಭಾವನೆ ಎಲ್ಲರಲ್ಲೂ ಮೂಡುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಈ ನಿಮ್ಮ ಪತ್ರಿಕೆ ಈಗ 52 ಸಾರ್ಥಕ ವರ್ಷಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ. ನಮ್ಮ ಆಶಯಗಳಿಗೆ ಧ್ವನಿಗೂಡಿಸಿ, ನಿಮ್ಮ ಅಭಿವ್ಯಕ್ತಿಗೆ ಸಾದೃಶ್ಯವಾಗಿರುವ ‘ಆಂದೋಲನ’ದ ಪ್ರತಿ ಹೆಜ್ಜೆಗೂ ನಿರಂತರ ಬೆಂಬಲ ಹಾಗೂ ಸಹಕಾರವನ್ನು ನೀಡುತ್ತಾ ಬಂದಿರುವ ಓದುಗರು, ಪತ್ರಿಕಾ ವಿತರಕರು ಹಾಗೂ ಜಾಹೀರಾತುದಾರರಿಗೆ ಧನ್ಯವಾದಗಳು.