Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕನ್ನಡ ಆಯ್ತು, ತಮಿಳಿನಲ್ಲೂ ಆರ್ ಚಂದ್ರು ಚಿತ್ರ ನಿರ್ಮಾಣ

ಆರ್. ಚಂದ್ರು ತಮ್ಮ ಆರ್‍.ಸಿ. ಸ್ಟುಡಿಯೋಸ್‍ ಬ್ಯಾನರ್‍ನಡಿ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದರು. ಈ ಪೈಕಿ ಮೊದಲ ಚಿತ್ರವಾದ ‘ಫಾದರ್‍’ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಮೈಸೂರಿನಲ್ಲಿ ‘ಡಾರ್ಲಿಂಗ್‍’ ಕೃಷ್ಣ ಮುಂತಾದವರು ಅಭಿನಯಿಸುತ್ತಿರುವ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಈ ಮಧ್ಯೆ, ಅವರು ತಮಿಳಿಗೆ ಹೊರಟು ನಿಂತಿದ್ದಾರೆ. ತಮಿಳಿನಲ್ಲಿ ಚಂದ್ರು ಒಂದು ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರವನ್ನು ದಯಾಳ್‍ ಪದ್ಮನಾಭನ್‍ ನಿರ್ದೇಶನ ಮಾಡುತ್ತಿದ್ದಾರೆ.

ದಯಾಳ್‍ಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ತಮ್ಮದೇ ‘ಆ ಕರಾಳ ರಾತ್ರಿ’ ಚಿತ್ರವನ್ನು ತಮಿಳಿಗೆ ‘ಕೊಂಡ್ರಾಳ್‍ ಪಾವಂ’ ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ನಂತರ ‘ಮಾರುತಿ ನಗರ್‍ ಪೊಲೀಸ್‍ ಸ್ಟೇಶನ್‍’ ಎಂಬ ಇನ್ನೊಂದು ಚಿತ್ರವನ್ನೂ ತಮಿಳಿನಲ್ಲಿ ನಿರ್ದೇಶಿಸಿದ್ದರು. ಈಗ ಮೂರನೆಯ ಚಿತ್ರವಾಗಿ, ಚಂದ್ರು ನಿರ್ಮಾಣದ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ದಯಾಳ್‍. ಇನ್ನೂ ಹೆಸರಿಡದ ಈ ಚಿತ್ರವು ಆಗಸ್ಟ್ ಮಧ್ಯದಲ್ಲಿ ಪ್ರಾರಂಭವಾಲಿದೆ.

ಇದೊಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪ್ಯಾನ್‍ ಇಂಡಿಯಾದ ಚಿತ್ರವೆಂದರೆ, ಗ್ರಾಫಿಕ್ಸ್, ಫ್ಯಾಂಟಸಿ ಎಲ್ಲವೂ ಹೆಚ್ಚಿರುತ್ತದೆ. ಆದರೆ, ಇದು ಕಂಟೆಂಟ್ ಇರುವ ಕ್ರೈಂ ಥ್ರಿಲ್ಲರ್‍ ಚಿತ್ರವಂತೆ. ಚಿತ್ರದಲ್ಲಿ ಗುರು ಸೋಮಸುಂದರಂ ಮತ್ತು ನಿಹಾರಿಕಾ ಕೊನಿಡೆಲಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಅಚ್ಯುತ್‍ ಕುಮಾರ್‍, ಲಿಝಿ ಆ್ಯಂಟೋನಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಹಂತಕ್ಕೆ ಬಂದಿದ್ದು, ಚಿತ್ರೀಕರಣ ಮಾತ್ರ ಬಾಕಿ ಇದೆ.

ವಿಶೇಷವೆಂದರೆ, ಒಂದು ಕಾಲಕ್ಕೆ ದಯಾಳ್‍ ಚಿತ್ರಗಳಿಗೆ ಆರ್. ಚಂದ್ರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ದಯಾಳ್‍, ಅದೇ ಚಂದ್ರು ನಿರ್ಮಾಣದಲ್ಲಿ ಚಿತ್ರ ನಿರ್ಮಿಸುತ್ತಿರುವುದು ವಿಶೇಷ.

ಈ ಮಧ್ಯೆ, ಚಂದ್ರು ನಿರ್ಮಾಣದ ‘ಫಾದರ್‍’ ಚಿತ್ರಕ್ಕೂ ದಯಾಳ್‍ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ‘ಗಾಳಿಪಟ’ ಮತ್ತು ‘ಸಂತು ಸ್ಟ್ರೇಟ್‍ ಫಾರ್ವರ್ಡ್’ ಚಿತ್ರಗಳ ಕಾರ್ಯಕಾರಿ ನಿರ್ಮಾಪಕರಾಗಿದ್ದವರು. ಈಗ ಮೂರನೆಯ ಬಾರಿಗೆ ದಯಾಳ್‍, ‘ಫಾದರ್‍’ ಚಿತ್ರವನ್ನು ಕಾರ್ಯಕಾರಿ ನಿರ್ಮಾಪಕರಾಗಿ ಮುನ್ನಡೆಸುತ್ತಿದ್ದಾರೆ.

Tags: