ಚಾಮರಾಜನಗರ : ತಾಲ್ಲೂಕಿನ ಬಸವಟ್ಟಿ ಗ್ರಾಮದ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ಬೈಕ್ ಮತ್ತು ಕೆಎಸ್ ಆರ್ ಟಿಸಿ ಬಸ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೆ ಸವಾರರಿಬ್ಬರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಕಮರವಾಡಿ ಗ್ರಾಮದ ಮಹೇಶ್ (48) ಮತ್ತು ಕಿಶೋರ್ (46) ಮೃತರು. ಇವರಿಬ್ಬರು ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಸ್ಕೂಟರ್ ನಲ್ಲಿ ಸಂತೇಮರಹಳ್ಳಿಯಿಂದ ಕಮರವಾಡಿ ಗ್ರಾಮಕ್ಕೆ ಹೋಗುತ್ತಿದ್ದರು.
ಇದೇ ಮಾರ್ಗವಾಗಿ ತಿ.ನರಸೀಪುರ ಕಡೆಯಿಂದ ಕೆಎಸ್ಆರ್ ಟಿಸಿ ಬಸ್ ಚಾಮರಾಜನಗರದ ಕಡೆಗೆ ಬರುತ್ತಿತ್ತು. ಬಸವಟ್ಟಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸವಾರರಾದ ಮಹೇಶ್ ಮತ್ತು ಕಿಶೋರ್ ರಸ್ತೆಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ. ವಿಪರೀತ ರಕ್ತಸ್ರಾವವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಸಂತೇಮರಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಶವಗಳನ್ನು ವಶಕ್ಕೆ ಪಡೆದು ಚಾ.ನಗರದ ಹೊರವಲಯದ ಸಿಮ್ಸ್ ಬೋಧನಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಈ ಸಂಬಂಧ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.