Mysore
19
overcast clouds
Light
Dark

ಸಿದ್ದರಾಮಯ್ಯ ಪತ್ನಿ ಪಾರ್ವತಿಗೂ ಮುಡಾದಲ್ಲಿ ಬದಲಿ ನಿವೇಶನ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ೫೦:೫೦ ಅನುಪಾತದಲ್ಲಿ ಸೈಟ್‌ ಹಂಚಿಕೆ ಮಾಡಿರುವ ವಿಚಾರದಲ್ಲಿ ದೊಡ್ಡ ಅಕ್ರಮವೇ ನಡೆದಿದೆ ಎಂಬ ವಿಚಾರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೂ ಭಾರೀ ಪ್ರಮಾಣದ ಭೂಮಿ ದೊರಕಿರುವ ದಾಖಲೆಗಳು ಸಿಕ್ಕಿದೆ.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಜಾಗವನ್ನು ೧೯೯೭ ರಲ್ಲಿ ಮೈಸೂರು ಮುಡಾ ವಶಕ್ಕೆ ಪಡೆದು ಆ ಭೂಮಿಗೆ ೨೦೨೧ ರಲ್ಲಿ ಪರಿಹಾರ ಸಹ ಕೊಟ್ಟಿದೆ. ಆದರೂ ಸಹ ಸಿಎಂ ಪತ್ನಿಗೆ ೫೦ : ೫೦ ಅನುಪಾತದಲ್ಲಿ ಪರಿಹಾರ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

೧೯೯೭ ರ ಆಗಸ್ಟ್‌ ೨೦ ರಂದು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂಬರ್‌ ೪೬೪ರಲ್ಲಿ ೩.೧೬ ಎಕರೆ ಭೂಮಿ ನೋಟಿಫೈ ಮಾಡಲಾಗಿತ್ತು. ಆ ಕಾಲದಲ್ಲಿ ೩,೨೪,೭೦೦ ರೂ ವೈಯಕ್ತಿಕ ಅವಾರ್ಡ್‌ ನೀಡಲಾಗಿತ್ತು. ಆದರೆ ೨೦೧೪ ರ ಜೂನ್‌ ೨೩ರಲ್ಲಿ ಮುಡಾಗೆ ಬದಲಿ ನಿವೇಶನ ನೀಡುವಂತೆ ಪಾರ್ವತಿ ಪತ್ರ ಬರೆದಿದ್ದರು.  ಈ ಸಂಬಂಧವಾಗಿ ೨೦೧೭ ಡಿಸೆಂಬರ್‌  ೧೫ ಹಾಗೂ ೨೦೧೪ರ ಡಿಸೆಂಬರ್‌ ೩೦ ರಂದು ಅರ್ಜಿದಾರರ ಭೂಮಿಗೆ ಸಮನಾಗಿ ಅಭಿವೃದ್ಧಿ ಪಡಿಸಿದ ಜಮೀನನ್ನು ನೀಡಲು ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇದಕ್ಕೂ ಒಪ್ಪದ ಸಿಎಂ ಪತ್ನಿ೨೦೨೧ ರ ಅಕ್ಟೋಬರ್‌ ೨೫ ರಂದು ಮುಡಾ ಗೆ ಮತ್ತೆ ಪತ್ರ ಬರೆದು ೫೦;೫೦ ಅನುಪಾತದಲ್ಲಿ ಬದಲಿ ನಿವೇಶನ ನೀಡಲು ಕೋರಿದ್ದಾರೆ. ಇವರ ಕೋರಿಕೆಯಂತೆ ೨೦೨೧ರ ಅಕ್ಟೋಬರ್‌ ೨೯ರಂದು ೫೦ :೫೦ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ೩೮೨೮೪ ಚದರ ಅಡಿ ಅಳತೆಯ ನಿವೇಶನವನ್ನು ಆಯುಕ್ತರು ನೀಡಿದ್ದರು. ಇದರೊಂದಿಗೆ ೧೯೯೭ ರಲ್ಲಿ ಕಳೆದುಕೊಂಡ ಭೂಮಿಗೆ ೨೦೨೧ ರಲ್ಲಿ ಸಿಎಂ ಪತ್ನಿ ಪಾರ್ವತಿಗೆ ಪರಹಾರ ಪಡೆದಿರುವ ದಾಖಲೆಗಳು ಬಯಲಾಗಿದೆ.