Mysore
20
overcast clouds
Light
Dark

ಋತುಬಂಧದ ಸಂಕಟಗಳಿಗೆ ಸರಳ ಪರಿಹಾರಗಳು

• ಡಾ.ಚೈತ್ರ ಸುಖೇಶ್

ಸಾಮಾನ್ಯವಾಗಿ 45 ವರ್ಷಗಳು ತುಂಬಿದ ನಂತರ ಮಹಿಳೆಯರಿಗೆ ಒಂದು ವರ್ಷದವರೆಗೂ ಋತುಚಕ್ರವು ಬರದೇ ಇದ್ದಲ್ಲಿ ಋತುಬಂಧದ ಸಮಸ್ಯೆ ಕಾಡಲಿದೆ.

ಈ ಋತುಬಂಧಕ್ಕೆ ಸಂಬಂಧಿಸಿದಂತೆ ಉಂಟಾಗುವ ಪ್ರಮುಖ ಸಮಸ್ಯೆಗಳಲ್ಲಿ ಗರ್ಭಕೋಶದ ಗೆಡ್ಡೆಗಳು, ಗರ್ಭಕೋಶದ ಹಿಗ್ಗುವಿಕೆ, ಉರಿಯೂತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಮುಟ್ಟು ನಿಲ್ಲುವ ಹಂತದಲ್ಲಿ ಅಧಿಕ ರಕ್ತಸ್ರಾವ, ಹೆಪ್ಪು ಹೆಪ್ಪಾಗಿ ರಕ್ತ ಸ್ರಾವವಾಗುವುದು, ನೋವು, ಸುಸ್ತು, ಮಾನಸಿಕವಾಗಿ ಉದ್ವೇಗ, ಒತ್ತಡ, ನಿದ್ರಾಹೀನತೆ, ಹಾರ್ಮೋನ್‌ಗಳ ಏರುಪೇರು
ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಋತುಬಂಧದ ಲಕ್ಷಣಗಳು: ಋತುಬಂಧವು ಕೆಲವೊಂದು ಲಕ್ಷಣಗಳನ್ನು ಹೊಂದಿದ್ದು, ಈ ಕೆಳಗಿನ ಲಕ್ಷಣಗಳು ನಿಮಗೆ ಅತಿಯಾದ ಪ್ರಮಾಣದಲ್ಲಿದ್ದರೆ, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದರೆ ಚಿಕಿತ್ಸೆ ಅಗತ್ಯ.
1. ಯೋನಿ ಶುಷ್ಕತೆ
2. ಅತಿಯಾದ ಉದ್ವೇಗ, ಕಿರಿಕಿರಿ
3. ತೂಕ ಹೆಚ್ಚಾಗುವುದು
4. ಅತಿಯಾದ ಬೇವರು
5. ಕೂದಲು ಉದುರುವಿಕೆ
6. ಹೃದಯ ಬಡಿತ ಹೆಚ್ಚಾಗುವುದು

ಪರಿಹಾರಗಳು: ಋತುಬಂಧ ಸಮಸ್ಯೆಗೆ ಸಾಮಾನ್ಯವಾಗಿ ನಮ್ಮ ಆಹಾರ ಶೈಲಿಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು.
1. ನಾವು ಸೇವಿಸುವ ದೈನಂದಿನ ಆಹಾರದಲ್ಲಿ ಶೇ.50ರಷ್ಟು ಧಾನ್ಯಗಳನ್ನು ಸೇವಿಸುವುದು ಅಗತ್ಯವಾಗಿರುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ಮತ್ತು ಜಿಂಕ್ ಅಂಶಗಳು ಸಮೃದ್ಧವಾಗಿರುವ ಆಹಾರ ಆರೋಗ್ಯಕ್ಕೆ ಉತ್ತಮ.
2. ಕಿತ್ತಳೆ, ದ್ರಾಕ್ಷಿ, ಮೂಸಂಬಿ ಸೇರಿದಂತೆ ಕೆಲ ಹಣ್ಣುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಹಾಗೂ ಹೆಚ್ಚಿನ ಪೊಟ್ಯಾಷಿಯಂ ಇರುವುದ ರಿಂದ ಇವುಗಳ ಸೇವನೆಯು ಗರ್ಭಕೋಶದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿವೆ. ಇವುಗಳೊಂದಿಗೆ ನವಣೆಯಂತಹ ಕಿರುಧಾನ್ಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಅದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.
3. ಗೋಡಂಬಿ, ಬಾದಾಮಿ, ವಾಲ್‌ನಟ್‌ನಂತಹ ಬೀಜಗಳಲ್ಲಿ Omega-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಈ ಎಲ್ಲ ಪೋಷಕಾಂಶಗಳು ಗರ್ಭಕೋಶದ ಫೈಬ್ರಾಯ್ಡ್ ಗೆಡ್ಡೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
4. ಎಲೆಕೋಸು, ಹೂ ಕೋಸು, ಬೊಕೋಲಿಗಳ ಸೇವನೆಯಿಂದ ಈಸ್ಟೋಜನ್,
ಹಾರ್ಮೋನ್ ಅಂಶಗಳು ಸೂಕ್ತ ಪ್ರಮಾಣದಲ್ಲಿ ದೇಹವನ್ನು ಸೇರಲು ಸಾಧ್ಯವಾಗುತ್ತದೆ. 5. ಹಾಲು, ಮೊಸರು, ಬೆಣ್ಣೆ, ಚೀಸ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಉತ್ತಮವಾಗಿರುವುದರ ಜತೆಗೆ ಇದು ಫೈಬ್ರಾಯ್ಡ್ಗಳನ್ನು ದೂರವಿರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
6. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಗರ್ಭಕೋಶದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಾಶಯವನ್ನು ಬಲಪಡಿಸುತ್ತದೆ

ಸೇವಿಸಬೇಕಾದ ಆಹಾರ
ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸುವ ಕಡೆ ಮಹಿಳೆಯರು ಗಮನಹರಿಸಬೇಕು. ಕಿತ್ತಳೆ, ದ್ರಾಕ್ಷಿ, ಹಸಿರು ತರಕಾರಿ, ಸೊಪ್ಪು, ಬೆಣ್ಣೆಹಣ್ಣು, ಹಾಲು, ಮೊಸರು, ಬೆಣ್ಣೆ, ಧಾನ್ಯಗಳು, ಮೊಟ್ಟೆ, ವಾಲ್‌ನಟ್‌ಗಳನ್ನು ಹೆಚ್ಚಾಗಿ ಸೇವಿಸಬೇಕು.

ಆಯುರ್ವೇದ ಚಿಕಿತ್ಸೆ…
1. ತ್ರಿಪಲ ಚೂರ್ಣ ಕಷಾಯ ಸೇವನೆ- ಇದು Antineoplastic ಗುಣಗಳನ್ನು ಹೊಂದಿದೆ. ಇದು ಫೈಬ್ರಾಯ್ಡ್ ಗೆಡ್ಡೆಗಳಿಗೆ ಪರಿಣಾಮಕಾರಿ ಔಷಧವಾಗಿ ಕೆಲಸ ಮಾಡುತ್ತದೆ.
2. ಅರಿಶಿನ ಇದು ಕೂಡ ಗೆಡ್ಡೆಯ ಬೆಳವಣಿಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಹಕಾರಿಯಾಗಿದೆ.
3. ಬೆಟ್ಟದ ನೆಲ್ಲಿಕಾಯಿ ಪುಡಿ ಅಥವಾ ಜ್ಯೂಸ್- ಇದು ಯಥೇಚ್ಛವಾಗಿ Anti-oxidant ಗುಣಗಳನ್ನು ಹೊಂದಿದ್ದು ಇದರ ಸೇವನೆ ಅಗತ್ಯ.
4. ಇದಲ್ಲದೆ ಪಂಚಕರ್ಮ ಚಿಕಿತ್ಸೆಗಳ ಮೂಲಕವೂ ಅನೇಕ ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಕೊಳ್ಳಬಹುದು.
chaiträsukesh18@gmail.com