Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ: ಎಷ್ಟು ಸರಿ?

• ವಿಲೈಡ್ ಡಿಸೋಜ, ಉಪ್ಪಿನಂಗಡಿ

ಕರ್ನಾಟಕ ಸರ್ಕಾರ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ವನ್ನು ಕೈಗೊಂಡಿದ್ದು, ಎಲ್‌ಜಿ ಮತ್ತು ಯುಕೆಜಿ ತರಗತಿ ಳನ್ನು ಅಂಗನವಾಡಿಗಳ ಮೂಲಕ ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ‌ ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಯರ ಸಂಘಟನೆಗಳ ಪ್ರತಿಭಟ ನೆಗೆ ಮಣಿದು ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರ ಪೂರ್ವ ಪ್ರಾಥಮಿಕ ಶಿಕ್ಷಣದ ಗುಣಾತ್ಮಕ ಭವಿಷ್ಯದ ದೃಷ್ಟಿಯಿಂದ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ.

ಅಪಾಯ ಕಣ್ಣ ಮುಂದಿದೆ: ಖಾಸಗಿ ಶಿಕ್ಷಣ ಸಂಸ್ಥೆಗಳು ಸೃಷ್ಟಿಸಿರುವ ನಕಲಿ ಬೇಡಿಕೆಯ ಅಬ್ಬರಕ್ಕೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆ ನಲುಗಿ ಹೋಗಿದೆ. 3 ರಿಂದ 6 ವರ್ಷ ವಯಸಿನ ಒಳಗಿನ ಕಂದಮ್ಮಗಳು ಅಂಗನವಾಡಿಯ ಅಂಗಣದಲ್ಲಿ ಖುಷಿ ಯಿಂದ ನಲಿಯುತ್ತಾ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಪ್ರವೇಶಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕಿತ್ತು. ಆದರೆ ಖಾಸಗಿ ಶಿಕ್ಷಣ ವ್ಯಾಪಾರಿಗಳು ಎಳೆಯ ಮಕ್ಕಳನ್ನು ಎಲ್ ಕೆಜಿ, ಯುಕೆಜಿ ಎನ್ನುವ ಮಾಯೆಯೊಳಗೆ ಸೆಳೆದು ಮಕ್ಕಳ ಪೋಷಕರನ್ನು ಲೂಟಿ ಮಾಡುತ್ತಿದ್ದಾರೆ. ಕೇವಲ ನಗರಗಳಿಗೆ ಸೀಮಿತವಾಗಿದ್ದ ಈ ದಂಧೆ ಈಗ ಹಳ್ಳಿಗಳಿಗೂ ದಾಳಿ ಮಾಡಿದೆ. ಇದರಿಂದ ಸರ್ಕಾರದ ಶಿಕ್ಷಣ ವ್ಯವಸ್ಥೆಗೆ ಗಂಭೀರವಾದ ಹಾನಿ ಉಂಟಾಗಿದೆ.

• ಮಕ್ಕಳಿಂದ ತುಂಬಿದ್ದ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ತುಂಬ ಕಡಿಮೆಯಾಗಿದೆ.

• ಅಂಗನವಾಡಿ ಪ್ರವೇಶಿಸದೆ ನೇರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್‌ಕೆಜಿ, ಯುಕೆಜಿಗೆ ಸೇರ್ಪಡೆಯಾದ ಮಕ್ಕಳು ಮುಂದೆ ಒಂದನೇ ತರಗತಿಗೆ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳನ್ನು ಸೇರುತ್ತಿದ್ದಾರೆ.

• ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಪ್ರತಿ ವರ್ಷ ಇಳಿಮುಖವಾಗುತ್ತಿದೆ.

• ಬಹಳಷ್ಟು ಕಡೆ 1 ರಿಂದ 7ನೇ ತರಗತಿವರೆಗೆ ಇರುವ ಸರ್ಕಾರಿ ಶಾಲೆಗಳಲ್ಲಿ ಒಟ್ಟು ಮಕ್ಕಳ ಸಂಖ್ಯೆ 30ಕ್ಕೂ ಕಡಿಮೆ ಇದ್ದು, ಇದರ ಪರಿಣಾಮವಾಗಿ ಸಾವಿರಾರು ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತದಲ್ಲಿವೆ.

• ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಲಿಯಾಗಿ ರುವ ನಗರ ಮತ್ತು ಗ್ರಾಮೀಣ ಬಡ ಕುಟುಂಬಗಳು ತಮ್ಮ ದುಡಿಮೆಯ ದೊಡ್ಡ ಪಾಲನ್ನು ತಮ್ಮ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣಕಾಗಿಯೇ ಖರ್ಚು ಮಾಡಬೇಕಾದ ಸ್ಥಿತಿಯನ್ನು ಎದುರಿಸುತ್ತಿವೆ. ಸರ್ಕಾರಿ ಶಿಕ್ಷಣ ವ್ಯವಸ್ಥೆ ಕಳಪೆ ಎನ್ನುವ ಅಪಾಯಕಾರಿ ಮನಸ್ಥಿತಿ ಸಮಾಜದಲ್ಲಿ ವ್ಯಾಪಕವಾಗುತ್ತಿದೆ.

ಸರ್ಕಾರದ ಪ್ರಯತ್ನಗಳು…ಈ ಬೆಳವಣಿಗೆ ಗಳು ಸರ್ಕಾರದ ಗಮನಕ್ಕೂ ಬಂದಿವೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿ ಮಾಡಲು ತೀರ್ಮಾನಿಸಿದ್ದರು. ಅಂಗನವಾಡಿಯಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಆವರಣದಲ್ಲಿ ಸುಸಜ್ಜಿತವಾದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು ಈ ನಿರ್ಧಾರದ ಹಿಂದಿನ ಆಶಯ ವಾಗಿತ್ತು. ಆಂಗ್ಲ ಮತ್ತು ಕನ್ನಡ ಮಾಧ್ಯಮದ ಶಿಕ್ಷಣಕ್ಕೂ ಅವಕಾಶ ಇತ್ತು. ಆದರೆ ಸಿದ್ದರಾಮಯ್ಯ ರವರ ಸರ್ಕಾರ ಹೋಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆಯನ್ನು ಕೈ ಬಿಟ್ಟಿತು. ಬೊಮ್ಮಾಯಿ
ಸರ್ಕಾರ ‘ಮಾದರಿ ಶಾಲೆ’ ಎನ್ನುವ ಯೋಜನೆಯನ್ನು ಘೋಷಿಸಿದರೂ ಅದು ಕಾರ್ಯಗತ ಆಗಲೇ ಇಲ್ಲ.

ಪ್ರಸ್ತುತ ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸುವ ನಿರ್ಧಾರವನ್ನು ಪ್ರಕಟಿಸಿತ್ತು.

ಸಂಘಟನೆಗಳ ವಿರೋಧ: ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆಗಳ ವ್ಯಾಪ್ತಿಗೆ ತರುವ ಬಗೆಗಿನ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಈ ನಿರ್ಧಾರ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈಗಾಗಲೇ ಮಕ್ಕಳ ಕೊರತೆಯನ್ನು ಎದುರಿಸುತ್ತಿರುವ ಅಂಗನವಾಡಿಗಳು ಇನ್ನಷ್ಟು ಸಮಸ್ಯೆಗೆ ಈಡಾಗುತ್ತವೆ. ಅಂಗನವಾಡಿಗಳನ್ನು ಮುಚ್ಚುವ ಸ್ಥಿತಿಯೂ ಬರ ಬಹುದು. ಹೀಗಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳ ವ್ಯಾಪ್ತಿಗೆ ತರಬೇಕು ಎನ್ನುವುದು ಸಂಘಟನೆಯ ಬೇಡಿಕೆಯಾಗಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಪ್ರತಿಭಟನೆಗೆ ಸಂಘಟನೆ ಸಿದ್ಧತೆ ನಡೆಸಿತ್ತು. ಸಂಘಟನೆ ಪ್ರತಿನಿಧಿ ಗಳು ಮತ್ತು ಸರ್ಕಾರದ ನಡುವೆ ಮಾತುಕತೆಯೂ ನಡೆದಿತ್ತು. ಇದೆಲ್ಲದರ ಪರಿಣಾಮವಾಗಿ ಪೂರ್ವ ಪ್ರಾಥ ಮಿಕ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಬದಲಾಗಿ, ಅಂಗನವಾಡಿಗಳ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಇಲಾಖೆಯ ಸಚಿವೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಮುಖ್ಯಾಂಶಗಳು ಹೀಗಿವೆ.

1. ರಾಜ್ಯದ ಎಲ್ಲ ಅಂಗನವಾಡಿಗಳ ಉನ್ನತೀಕರಣ
2. ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (LKG, UKG) ವನ್ನು ಅಂಗನವಾಡಿಗಳ ವ್ಯಾಪ್ತಿಗೆ ತರುವುದು
3. ಇದರ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಸಲಹೆ ನೀಡಲು ತಜ್ಞರ ಸಮಿತಿ ರಚನೆ
4. ಪೂರ್ವ ಪ್ರಾಥಮಿಕ ಶಿಕ್ಷಣ ವ್ಯಾಪ್ತಿಗೆ ಬರುವ ಮಕ್ಕಳಿಗೆ ಇಲಾಖೆಯಿಂದಲೇ ಬ್ಯಾಗ್, ಸಮವಸ್ತ್ರ ಮತ್ತು ಪುಸ್ತಕಗಳ ವಿತರಣೆ
5. ಪ್ರಾಥಮಿಕ ಮತ್ತು ಮೇಲಿನ ಹಂತಗಳ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲೇ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೂ ವರ್ಗಾವಣೆ ಪತ್ರ (TC) ನೀಡುವ ನಿರ್ಧಾರ

ಅಂಗನವಾಡಿ ವ್ಯಾಪ್ತಿಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸರ್ಕಾರದ ನಿರ್ಧಾರ ಕಾರ್ಯಗತವಾದರೆ ಏನಾಗಬಹುದು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಖಾಸಗಿ ಶಿಕ್ಷಣ ವ್ಯಾಪಾರಿಗಳ ಹಿಡಿತದಿಂದ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಮುಕ್ತಗೊಳಿಸುವ ಸಾಮರ್ಥ್ಯ ಅಂಗನವಾಡಿಗಳಿಗೆ ಇದೆಯೇ? ಗರ್ಭಿಣಿ ಯರು, ಬಾಣಂತಿಯರು, ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಮಕ್ಕಳಿಗೆ ಈವರೆಗೆ ಅಂಗನವಾಡಿಗಳ ಮೂಲಕ ನೀಡಲಾಗುತ್ತಿರುವ ಸೇವೆಗಳ ಭವಿಷ್ಯ ಹೇಗೆ? ಅಂಗನವಾಡಿಗಳನ್ನು ಹತ್ತಿರದಿಂದ ಗಮನಿಸಿ ದವರಿಗೆ ಪ್ರಶ್ನೆಗಳಿಗೆ ಉತ್ತರ ಹುಡುಕಲು ಕಷ್ಟವಾಗುವುದಿಲ್ಲ.

• ರಾಜ್ಯದ ಸುಮಾರು ಶೇ.20ರಷ್ಟು ಅಂಗನವಾಡಿಗಳು ಮಾತ್ರ ತಮ್ಮ ಮೂಲ ಉದ್ದೇಶವನ್ನು ಈಡೇರಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರಬಹುದು. ಉಳಿದ ಶೇ.80ರಷ್ಟು ಅಂಗನವಾಡಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ.
• ಗ್ರಾಮ ಪಂಚಾಯಿತಿಗಳು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಇರುವ ಕಡೆ ಮಾತ್ರ ಅಂಗನವಾಡಿಗಳಿಗೆ ಪರಿಪೂರ್ಣವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿದೆ. ಬಹಳಷ್ಟು ಕಡೆ ಅಂಗನವಾಡಿಗಳಿಗೆ ಸೂಕ್ತವಾದ ಕಟ್ಟಡವೇ ಇಲ್ಲ.
• ಅಂಗನವಾಡಿಗಳ ಕಾರ್ಯಕರ್ತೆಯರನ್ನು ಸರ್ಕಾರದ ಅನ್ಯ ಸೇವೆಗಳಿಗೆ ಬಳಸಿಕೊಳ್ಳುವ ಪ್ರವೃತ್ತಿಯಿಂದಾಗಿ ಅವರು ಅಂಗನವಾಡಿಗಳಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಅಂಗನವಾಡಿ ಕಾರ್ಯಕರ್ತೆಯರ ಸಾಮಾಜಿಕಮತ್ತು ಶೈಕ್ಷಣಿಕ ಹಿನ್ನೆಲೆಯಾಗಲೀ, ಅವರು ಪಡೆದಿ \ರುವ ತರಬೇತಿಯಾಗಲೀ ಉತ್ತಮ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಒದಗಿಸಲು ಪೂರಕವಾಗಿಲ್ಲ. (ಈ ಅಂಶಗಳ ಜೊತೆಗೆ ಬಹಳ ಪ್ರಮುಖವಾಗಿ ಮುನ್ನೆಲೆಗೆ ಬರುತ್ತವೆ)
• ಅಂಗನವಾಡಿಗಳಿಗೆ 3 ರಿಂದ 6 ವರ್ಷ ವಯಸ್ತಿನೊಳಗಿನ ಮಕ್ಕಳು ಬರುತ್ತಾರೆ. ಪೂರ್ವ ಪ್ರಾಥಮಿಕ ಶಿಕ್ಷಣವನು ಅಂಗನವಾಡಿಗಳ ವ್ಯಾಪ್ತಿಗೆ ತರಬೇಕಾದರೆ ಈ ಮಕ್ಕಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬೇಕು.
• ಮೊದಲನೆಯ ಗುಂಪಿನಲ್ಲಿ 3ರಿಂದ 4 ವರ್ಷ ವಯಸ್ಸಿನ ಮಕ್ಕಳು ಇರುತ್ತಾರೆ. ಈ ಮಕ್ಕಳಿಗೆ ಹಾಡು, ಕುಣಿತ, ಕತೆಗಳ ಮೂಲಕ ಕಲಿಕೆ. ಎರಡನೆಯ ಗುಂಪಿನಲ್ಲಿ ಎಲ್‌ಕೆಜಿ ವಯಸ್ಸಿನ ಮಕ್ಕಳು (4-5 ವಯಸ್ಸು) ಇರುತ್ತಾರೆ. ಮೊದಲ ಗುಂಪಿನ ಚಟುವಟಿಕೆಗಳ ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ವರ್ಣಮಾಲೆ ಹಾಗೂ ಅಂಕಿಗಳ ಪರಿಚಯ ಆಗಬೇಕು. ಮೂರನೆಯ ಗುಂಪಿನಲ್ಲಿ 5-6 ವರ್ಷ ವಯಸ್ಸಿನ ಮಕ್ಕಳು ಇರುತ್ತಾರೆ. ಇವರ ಕಲಿಕೆ ಮುಂದಿನ ಒಂದನೇ ತರಗತಿಗೆ ಪೂರಕವಾಗಿರಬೇಕು.

ಈ ಮೂರು ಗುಂಪುಗಳ ಮಕ್ಕಳನ್ನು ಪ್ರತ್ಯೇಕ ಪಠ್ಯಕ್ರಮದ ಮೂಲಕ ಶಿಕ್ಷಣದ ಮುಖ್ಯವಾಹಿನಿಗೆ ತರುವ ಸಾಮರ್ಥ್ಯ ಅಂಗನವಾಡಿ ವ್ಯವಸ್ಥೆಗೆ ಇದೆಯೇ? ಈ ಪ್ರಶ್ನೆಗೆ ಯಾರು ಉತ್ತರಿಸಬೇಕು!?
wdshejje@gmail.com

Tags: