Mysore
18
scattered clouds

Social Media

ಶನಿವಾರ, 31 ಜನವರಿ 2026
Light
Dark

ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್‌ ಹೆಸರು ಅಂತಿಮ.?

ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ವಿಧಾನಪರಿಷತ್‌ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಪಕ್ಷದ ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿದ್ದ ಯೋಗೇಶ್ವರ್‌ ಅವರು, ಕುಮಾರಸ್ವಾಮಿ ಅವರನ್ನು ಕಂಡು ಮಾತುಕತೆ ನಡೆಸಿದ್ದಾರೆ. ಈ ವೇಳೆ ಚನ್ನಪಟ್ಟಣದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಮೈತ್ರಿ ಪಕ್ಷಗಳ ಮೂಲಗಳ ಪ್ರಕಾರ ಯೋಗೇಶ್ವರ್‌ ಅವರಿಗೆ ಬಿಜೆಪಿ ಟಿಕೆಟ್‌ ಅಂತಿಮವಾಗುವ ಲಕ್ಷಣ ದಟ್ಟವಾಗಿದೆ.

ಜೆಡಿಎಸ್‌ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸತತ ಎರಡು ಸಲ ಚನ್ನಪಟ್ಟಣದಿಂದ ಜಯ ಸಾಧಿಸಿದ್ದು, ಅವರ ಒಲವು ಯಾರ ಪರ ಇದೆಯೋ ಅವರೇ ಸ್ಪರ್ಧಿಯಾಗುವುದು ಬಹುತೇಕ ಖಚಿತ. ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿಯವರು ಸಹ ಕುಮಾರಸ್ವಾಮಿ ಅವರಿಗೆ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಈಗಾಗಲೇ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಹಾಗಾಗಿ ಕುಮಾರಸ್ವಾಮಿ ಅವರಿಗೆ ಪಕ್ಷ ಪ್ರತಿಷ್ಠೆಗಿಂತ ಗೆಲುವೇ ಮುಖ್ಯವಾಗಿದೆ. ಸದ್ಯ ಕ್ಷೇತ್ರದಲ್ಲಿ ಯೋಗೇಶ್ವರ್‌ ಪರ ಹೆಚ್ಚಿನ ದನಿ ಮೊಳಗುತ್ತಿದೆ. ಬಿಜೆಪಿಯ ಜಿಲ್ಲಾಧ್ಯಕ್ಷರೇ ಸ್ವತಃ ಸುದ್ದಿಗೋಷ್ಠಿ ನಡೆಸಿ ಸಿಪಿವೈಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿ ಹೆಸರು ಅಷ್ಟಾಗಿ ಕೇಳಿ ಬರುತ್ತಿಲ್ಲ. ಚುನಾವಣೆ ಗೆಲುವು ಎಚ್.ಡಿ.ಕುಮಾರಸ್ವಾಮಿಗೆ ಪ್ರತಿಷ್ಠೆಯಾಗಿರುವುದರಿಂದ ಸಿಪಿವೈ ಆಯ್ಕೆ ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.

ಸಚಿವ ಹಾಗೂ ಶಾಸಕನಾಗಿ ಯೋಗೇಶ್ವರ್‌ ಅವರಿಗೆ ಹೆಚ್ಚಿನ ರಾಜಕೀಯ ಅನುಭವವಿದೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಅವರಿಗೆ ತಮ್ಮದೇ ಮತಬ್ಯಾಂಕ್‌ ಇದೆ. ತಾಲ್ಲೂಕಿನ ನೀರಾವರಿ ಅಭಿವೃದ್ಧಿಗೆ ಅವರ ಕೊಡುಗೆ ದೊಡ್ಡದಾಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟದ ಗೆಲುವು ಪ್ರತಿಷ್ಠೆಯಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಕುರಿತು ಸದ್ಯದಲ್ಲೇ ಎನ್‌ಡಿಎ ನಾಯಕರು ಮತ್ತು ಮುಖಂಡರ ಸಭೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

 

 

 

 

Tags:
error: Content is protected !!