ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಸ್ಥಾನದ ಕುರಿತು ಕಚ್ಚಾಟ ಶುರುವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಸ್ಥಾನದ ಕುರಿತು ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಸ್ಥಾನದ ಕುರಿತು ಭಾರೀ ದಂಗಲ್ ಶುರುವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು. ಸಿಎಂ ಸ್ಥಾನದ ಕುರಿತು ಪಕ್ಷದೊಳಗೆ ಒಡಕು ಉಂಟಾಗಿದೆ. ಈ ಬಗ್ಗೆ ಒಕ್ಕಲಿಗ ಸ್ವಾಮೀಜಿ ಕೂಡ ಮಾತನಾಡಿದ್ದಾರೆ. ಸಿಎಂ ಬದಲಾವಣೆ ಹಾಗೂ ಮೂರು ಡಿಸಿಎಂ ಮಾಡುವಲ್ಲಿ ಎಲ್ಲರೂ ಮುಳುಗಿದ್ದು, ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, ಈ ಸರ್ಕಾರಕ್ಕೆ ನೀರು ಕೊಡುವ ಯೋಗ್ಯತೆಯೂ ಇಲ್ಲವಾಗಿ, ಜನರು ಕಲುಷಿತ ನೀರು ಸೇವಿಸಿ ಸಾಯುತ್ತಿದ್ದಾರೆ. ಡೆಂಗ್ಯೂ ಸೋಂಕು ಹರಡಿ ಜನರು ತೊಂದರೆಗೊಳಗಾಗಿದ್ದರೂ ಅದಕ್ಕೆ ಸರ್ಕಾರ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತಾಡುತ್ತಿದ್ದಾರೆ. ಮುಂದೆ ಕುರುಬ ಸಮುದಾಯದವರು ಮಾತನಾಡುತ್ತಾರೆ. ಜಾತಿಗಳ ನಡುವೆ ಕಾಂಗ್ರೆಸ್ ಕಚ್ಚಾಟ ಹುಟ್ಟುಹಾಕುತ್ತಿರುವುದು ಒಳ್ಳೆಯದಲ್ಲ. ಜಾತಿಗಳನ್ನು ಒಡೆಯುವ ಕಾಂಗ್ರೆಸ್ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಸಿಎಂ ಸಿದ್ದು ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.