Mysore
28
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ದಾಖಲೆ ಮಳೆಗೆ ತತ್ತರಿಸಿದ ದೆಹಲಿ: ವಿದ್ಯುತ್‌ ಇಲ್ಲದೇ ಜನರ ಪರದಾಟ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿದ 88 ವರ್ಷದ ದಾಖಲೆ ಮಳೆಗೆ ಜನ ತತ್ತರಿಸಿದ್ದು, ಭಾರೀ ಮಳೆಗೆ ಆರು ಮಂದಿ ಮೃತಪಟ್ಟಿದ್ದಾರೆ.

ಜುಲೈ.1ರವರೆಗೆ ದೆಹಲಿಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಜನತೆಯಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆಯಿಂದ ಬಸವಳಿದಿರುವ ದೆಹಲಿ ಜನತೆ, ಭಾರೀ ಮಳೆಗೆ ತತ್ತರಿಸಿ ಹೋಗಿದ್ದಾರೆ.

ಭಾರೀ ಮಳೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕತ್ತಲಲ್ಲೇ ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಬಾಲಕರು ಮಳೆ ನೀರು ತುಂಬಿದ ಹಳ್ಳದಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮತ್ತೊಂದು ಘಟನೆಯಲ್ಲಿ ಶಾಲಿಮಾರ್‌ ಬಾಗ್‌ ಪ್ರದೇಶದಲ್ಲಿ ಪ್ರವಾಹಕ್ಕೆ ಒಳಗಾದ ಅಂಡರ್‌ಪಾಸ್‌ನಲ್ಲಿ ವ್ಯಕ್ತಿಯೊಬ್ಬ ಮುಳುಗಿ ಸಾವನ್ನಪ್ಪಿದ್ದಾನೆ. ವಸಂತ ವುಹಾರ್‌ನಲ್ಲಿ ಕುಸಿದ ನಿರ್ಮಾಣ ಹಂತದ ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದೆ.

ಭಾರೀ ಮಳೆಯಿಂದಾಗಿ ಹಲವೆಡೆ ಬೃಹತ್‌ ಮರಗಳು ಧರೆಗುರುಳಿದ್ದು, ಜನವಸತಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಆಸ್ತಿ ಮತ್ತು ಕಾರುಗಳಿಗೆ ಹಾನಿಯಾಗಿದೆ. ಅನೇಕ ವಸತಿ ಪ್ರದೇಶದಲ್ಲಿ ಸ್ಥಳೀಯರು ತಮ್ಮ ಮನೆಗಳನ್ನು ಬಿಡಲು ಸೊಂಟದ ಆಳದ ನೀರಿನ ಮೂಲಕ ಪರದಾಡುವಂತಾಗಿದೆ.

88 ವರ್ಷಗಳಲ್ಲಿ ಜೂನ್‌ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಮಳೆ ಸುರಿದಿದ್ದು, ಮಳೆಯಿಂದ ಇಡೀ ನಗರ ಸ್ತಬ್ಧಗೊಂಡಿದೆ. ಇನ್ನೂ ದೆಹಲಿಯ ಕೆಲವು ಭಾಗಗಳಲ್ಲಿ ಜುಲೈ.1ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 

Tags:
error: Content is protected !!