Mysore
22
broken clouds
Light
Dark

ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯೂ ಮಹಾಮಾರಿ ಅಟ್ಟಹಾಸ: ಇಂದು ಇಬ್ಬರು ಸಾವು

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾವಿನ ಪ್ರಮಾಣ ಕೂಡ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಬೆಂಗಳೂರಿನ ಜನತೆ ಡೆಂಗ್ಯೂ ಕಪಿಮುಷ್ಟಿಯಲ್ಲಿ ವಿಲವಿಲ ಒದ್ದಾಡುತ್ತಿದ್ದು, ಏರಿಯಾ ಏರಿಯಾಗಳಲ್ಲೂ ಡೆಂಗ್ಯೂ ತಾಂಡವವಾಡುತ್ತಿದೆ. ಇಂದು ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಹಾಗೂ 27 ವರ್ಷದ ಯುವಕ ಡೆಂಗ್ಯೂಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಓಟ ಜೋರಾಗಿದೆ. ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷ ಜೂನ್‌ ತಿಂಗಳಿನಲ್ಲಿ ದುಪ್ಪಟ್ಟು ಕೇಸ್‌ಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ.

ಸಾವಿನ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದ್ದು, ಜನತೆ ಜಾಗ್ರತೆ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮನೆಯ ಸುತ್ತಮುತ್ತಾ ಮಳೆ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿ, ಮಳೆ ನೀರು ಸರಾಗವಾಹಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ, ರೋಗ ಲಕ್ಷಣಗಳು ಕಂಡು ಬಂದರೆ, ಶೀಘ್ರದಲ್ಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ. ಎಲ್ಲಾ ಕಡೆ ಶುಚಿತ್ವ ಕಾಪಾಡಿ ಎಂದು ಆರೋಗ್ಯ ಇಲಾಖೆ ಜನತೆಗೆ ಮನವಿ ಮಾಡಿದೆ.